

ಬೆಂಗಳೂರು: ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ(ಜಿಕೆವಿಕೆ) ನ.11ರಿಂದ 14ರವರೆಗೆ 'ಕೃಷಿಮೇಳ-2021' ನಡೆಯಲಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ ಈ ಮೇಳಕ್ಕೆ ನ.11ರ ಬೆಳಗ್ಗೆ 11ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂ. ಕೃಷಿ ವಿವಿ ಕುಲಪತಿ ಪ್ರೊ.ಎಸ್. ರಾಜೇಂದ್ರ ಪ್ರಸಾದ್, ಕೃಷಿ ಕ್ಷೇತ್ರದಲ್ಲಿನ ಗಣನೀಯ ಸಾಧನೆಗೆ 7 ರಾಜ್ಯಮಟ್ಟದ ಪ್ರಶಸ್ತಿ, 10 ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ ಮತ್ತು ರೈತ ಮಹಿಳಾ ಪ್ರಶಸ್ತಿ ಹಾಗೂ 61 ತಾಲೂಕು ಮಟ್ಟದ ಪ್ರಶಸ್ತಿಗಳನ್ನು ಕೃಷಿ ಮೇಳದಲ್ಲಿ ನೀಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ರೈತರ ಆದಾಯ ದ್ವಿಗುಣಗೊಳಿಸುವ ಕೃಷಿ ತಂತ್ರಜ್ಞಾನ, ಸುಧಾರಿತ ಬೇಸಾಯ, ಮಾರುಕಟ್ಟೆ, ಮೌಲ್ಯವರ್ಧನೆ ಬಗ್ಗೆ ಮಾಹಿತಿ ನೀಡಲಾಗುವುದು. ಈ ಬಾರಿ ವಸ್ತು ಪ್ರದರ್ಶನದಲ್ಲಿ 250 ಮಳಿಗೆಗಳು ಇರಲಿವೆ. ಕೃಷಿ ಸಚಿವ ಬಿ.ಸಿ. ಪಾಟೀಲ್, ಶಾಸಕ ಕೃಷ್ಣ ಬೈರೇಗೌಡ, ಸಚಿವರಾದ ಎಸ್.ಟಿ. ಸೋಮಶೇಖರ್, ಡಾ.ಕೆ. ಸುಧಾಕರ್, ಸಂಸದ ಬಿ.ಎನ್. ಬಚ್ಚೇಗೌಡ ಇತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಆನ್ಲೈನ್ನಲ್ಲಿ ನೇರಪ್ರಸಾರ: ಜಿಕೆವಿಕೆ ಮುಖ್ಯದ್ವಾರದಿಂದ ಕೃಷಿ ಮೇಳದ ಸಂಭಾಗಣದವರಿಗೆ ಉಚಿತ ವಾಹನ ವ್ಯವಸ್ಥೆ ಇರುತ್ತದೆ. ಅಂಗೈಯಲ್ಲಿ ಕೃಷಿಮೇಳ ವೀಕ್ಷಣೆಗೆ ಅನುಕೂಲವಾಗುವಂತೆ ವೆಬ್ಪೇಜ್, ವೆಬ್ಸೈಟ್, ಯುಟ್ಯೂಬ್, ಫೇಸ್ಬುಕ್ ಮತ್ತು ಜೂಮ್ ಸಭೆಯಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ನೇರಪ್ರಸಾರ ವೀಕ್ಷಿಸಬಹುದು.