ಬೆಂಗ್ಳೂರಲ್ಲಿ ನೋಡನೋಡ್ತಿದ್ದಂತೆ ದೇವರ ಕೋಣೆ ದೀಪದ ಬೆಂಕಿ ಹೊತ್ತಿ ಸಿಲಿಂಡರ್​ ಸ್ಫೋಟ: ಭಯಾನಕ ದೃಶ್ಯ ವೈರಲ್​

gas fire
Published on

ಬೆಂಗಳೂರು: ಚಂದ್ರಾಲೇಔಟ್​ನ ಮನೆಯೊಂದರಲ್ಲಿ ಸೋಮವಾರ ರಾತ್ರಿ ಅಡುಗೆ ಅನಿಲ ಸಿಲಿಂಡರ್​ ಸ್ಫೋಟಗೊಂಡಿದ್ದು, 7 ಮಂದಿ ಗಾಯಗೊಂಡಿದ್ದಾರೆ. ಕುಟುಂಬಸ್ಥರ ಎಚ್ಚರಿಕೆಯ ನಡೆಯಿಂದ ಭಾರೀ ದುರಂತ ತಪ್ಪಿದ್ದು, ನೋಡ ನೋಡುತ್ತಿದ್ದಂತೆ ಗ್ಯಾಸ್​ ಸಿಲಿಂಡರ್ ಸ್ಫೋಟಗೊಂಡು ಬೆಂಕಿಯ ಕೆನ್ನಾಲಗೆ ಹೊರ ಬಂದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಚಂದ್ರಾಲೇಔಟ್​ನ ಅತ್ತಿಗುಪ್ಪೆಯ ನರಸಿಂಹಸ್ವಾಮಿ ದೇವಾಲಯದ ಬಳಿ ರಾಮಕ್ಕ ಸ್ವಂತ ಮನೆ ಹೊಂದಿದ್ದು, ಮೊದಲನೇ ಮಹಡಿಯಲ್ಲಿ ಅನಿತಾ, ರಚನಾ ಜತೆ ವಾಸಿಸುತ್ತಿದ್ದರು. ನೆಲ ಮಹಡಿಯಲ್ಲಿ ಬಸ್​ ಚಾಲಕ ಸುಕುಮಾರ್​ ಕುಟುಂಬಸ್ಥರ ಜತೆ ಬಾಡಿಗೆಗೆ ನೆಲೆಸಿದ್ದರು. ಸೋಮವಾರ ರಾತ್ರಿ 8.45ರಲ್ಲಿ ಸುಕುಮಾರ್​ ಪತ್ನಿ ಹರ್ಷಾ ಅಡುಗೆ ಮನೆಗೆ ಹೋಗಿ ನೋಡಿದಾಗ ಸಿಲಿಂಡರ್​ನಿಂದ ಅನಿಲ ಸೋರಿಕೆಯಾಗಿರುವ ವಾಸನೆ ಬಂದಿತ್ತು. ಕೂಡಲೇ ಮನೆಯಲ್ಲಿದ್ದ ಸುಕುಮಾರ್​ ಹಾಗೂ ಮಕ್ಕಳಾದ ನವ್ಯಶ್ರೀ ಮತ್ತು ಹೇಮೇಶ್ವರ್​ಗೆ ಮಾಹಿತಿ ನೀಡಿ ಎಲ್ಲರೂ ಹೊರಗೆ ಓಡಿ ಬಂದಿದ್ದರು. ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದ ರಾಮಕ್ಕ, ಅನಿತಾ ಹಾಗೂ ರಚನಾ ಸಹ ಏನಾಯಿತೆಂದು ನೆಲ ಮಹಡಿಗೆ ಬಂದು ನೋಡುತ್ತಿದ್ದಂತೆ ದೇವರ ಕೋಣೆಯಲ್ಲಿ ಉರಿಯುತ್ತಿದ್ದ ದೀಪದಿಂದ ಬೆಂಕಿ ಹೊತ್ತಿ ಸಿಲಿಂಡರ್​ ಸ್ಫೋಟಗೊಂಡಿದೆ. ಮನೆಯೊಳಗಿದ್ದ ಪೀಠೋಪಕರಣ, ಅಡುಗೆ ಮನೆಯಲ್ಲಿದ್ದ ವಸ್ತುಗಳು ಸುಟ್ಟುಹೋಗಿವೆ.

ಪರಿಣಾಮ ಮನೆಯ ಕಿಟಕಿ ಬಳಿ ನಿಂತಿದ್ದ ಸುಕುಮಾರ್​ (48), ಹರ್ಷಾ (41), ನಶ್ರೀ (13), ಹೇಮೇಶ್ವರ್​ (7), ರಾಮಕ್ಕ (65), ಅನಿತಾ (31), ರಚನಾ(21) ಅವರ ಮುಖ, ತಲೆ, ಕೈ, ಕಾಲುಗಳಿಗೆ ಬೆಂಕಿ ತಗುಲಿ ಗಾಯಗಳಾಗಿದೆ. ಸ್ಥಳಕ್ಕೆ ಧಾವಿಸಿದ ನೆರೆ-ಹೊರೆಯವರು ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಾಮಕ್ಕ ಸ್ಥಿತಿ ಗಂಭೀರವಾಗಿದ್ದು, ಉಳಿದವರ ದೇಹಕ್ಕೆ ಕಡಿಮೆ ಪ್ರಮಾಣದಲ್ಲಿ ಸುಟ್ಟಗಾಯಗಳಾಗಿವೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net