ನಕಲಿ ಗಾಂಧಿಗಳ ಬಗ್ಗೆ ನಾನು ಮಾತನಾಡಲ್ಲ: ಸಿಎಂ ಬಸವರಾಜ ಬೊಮ್ಮಾಯಿ‌

New Project(17)
Published on

ಬೆಂಗಳೂರು: ಇವತ್ತು ಗಾಂಧೀಜಿ ಜನ್ಮದಿನ. ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆಪಾದನೆ ಮಾಡುತ್ತಿರುವ ನಕಲಿ ಗಾಂಧಿಗಳ ಬಗ್ಗೆ ಮಾತನಾಡಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ವ್ಯಂಗ್ಯವಾಡಿದರು.

ಗಾಂಧಿ ಹಾಗೂ ಲಾಲ್ ಬಹಾದೂರ್​​ ಶಾಸ್ತ್ರಿ ಜಯಂತಿ ನಿಮಿತ್ತ ವಿಧಾನಸೌಧ ಆವರಣದಲ್ಲಿ ಅವರ ಪ್ರತಿಮೆ ಹಾಗೂ ಭಾವಚಿತ್ರಕ್ಕೆ ಭಾನುವಾರ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಸುದ್ದಿಗಾರರ ಜತೆಗೆ ಮಾತನಾಡಿದರು.

ಭ್ರಷ್ಟಾಚಾರ ಪ್ರಕರಣದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್ ಜಾಮೀನಿನ ಮೇಲೆ ಹೊರಗಿದ್ದಾರೆ. ಅಂದ ಮೇಲೆ ಇಡೀ ಪಕ್ಷವೇ ಜಾಮೀನು ಪಡೆದಂತಾಗಿದ್ದು, ನಕಲಿ ಗಾಂಧಿಗಳ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದರು.

ಈ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಎಟಿಎಂ ಆಗಿತ್ತು. ಅದೀಗ ನಿಂತು ಹೋಗಿದೆ. ಶೇ40 ಕಮಿಷನ್ ಬಗ್ಗೆ ಮಾತನಾಡುವವರು ದಾಖಲೆ ನೀಡಿದರೆ ತನಿಖೆಗೆ ಒಪ್ಪಿಸಲು ಸಿದ್ಧವೆಂದು ಸಿಎಂ ಬೊಮ್ಮಾಯಿ‌ ಪುನರುಚ್ಚರಿಸಿದರು.

ಹತ್ತು-ಹಲವು ಅವಮಾನಗಳನ್ನು ಅನುಭವಿಸಿಯೂ ಗಾಂಧೀಜಿ ಹೋರಾಟ ಮುಂದುವರಿಸಿದರು. ಅವರು ಇಡೀ ದೇಶಕ್ಕೆ ಪ್ರೇರಣಾ ಶಕ್ತಿ. ಸತ್ಯ ಮತ್ತು ಅಹಿಂಸೆ ಎಂಬ ಎರಡು ಅಸ್ತ್ರಗಳನ್ನು ಭಾರತಕ್ಕೆ ನೀಡಿದ್ದಾರೆ. ಬಡತನದಿಂದ ಬೆಳೆದು ಪ್ರಧಾನಮಂತ್ರಿಯಾದ ಲಾಲ್ ಬಹಾದುರ್ ಶಾಸ್ತ್ರಿ ಆಳ್ವಿಕೆ ಅಲ್ಪವೇ ಆದರೂ ಆದರ್ಶ ಪ್ರಧಾನಿಯಾಗಿ ದೇಶದ ಜನರ ಮನದಲ್ಲಿದ್ದಾರೆ. ರೈತರು ಹಾಗೂ ಸೈನಿಕರಿಗೆ ವಿಶೇಷ ಗೌರವ, ದೇಶದ ಆಹಾರ ಭದ್ರತೆಗಾಗಿ ಹಸಿರು ಕ್ರಾಂತಿ ಮಾಡಿದವರು ಎಂದು ಸಿಎಂ ಬೊಮ್ಮಾಯಿ‌ ಗುಣಗಾನ ಮಾಡಿದರು. ಸಚಿವರಾದ ಗೋವಿಂದ ಕಾರಜೋಳ, ಎಂಟಿಬಿ ನಾಗರಾಜ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಇದ್ದರು.

ಫಿಟ್ ಇಂಡಿಯಾ ರನ್ ಓಟಕ್ಕೆಚಾಲನೆ: ಇದೇ ವೇಳೆ ವಿಧಾನಸೌಧ ಮೆಟ್ಟಿಲು ಬಳಿ ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ಏರ್ಪಡಿಸಿದ್ದ 'ಫಿಟ್ ಇಂಡಿಯಾ ರನ್'ಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net