

ಚನ್ನಪಟ್ಟಣ: ಹಸು ಮೇಯಿಸಿಕೊಂಡು ಮನೆಗೆ ಹೊರಡುವಾಗ ಮಾರ್ಗಮಧ್ಯೆ ಕಣ್ವ ನದಿ ದಾಟುತ್ತಿದ್ದ ರೈತ ದಂಪತಿಗಳು ದುರಂತ ಅಂತ್ಯ ಕಂಡ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ನಡೆದಿದೆ.
ಕೂಡ್ಲೂರು ಗ್ರಾಮದ ವೆಂಕಟೇಶ್ (55) ಮತ್ತು ಕಾಳಮ್ಮ (50) ಮೃತ ದುರ್ದೈವಿಗಳು. ಕೂಡ್ಲೂರು ಗ್ರಾಮದಿಂದ ಪಕ್ಕದ ಮಿಣಿಕೆರೆ ಗ್ರಾಮದಲ್ಲಿನ ಜಮೀನಿನಲ್ಲಿ ಹಸು ಮೇಯಿಸಿಕೊಂಡು ಮನೆಗೆ ಹೋಗುವಾಗ ಗುರುವಾರ ಸಂಜೆ ಈ ದುರಂತ ನಡೆದಿದೆ.
ಎರಡು ಗ್ರಾಮಗಳ ನಡುವೆ ಕಣ್ವ ನದಿಯಿದ್ದು, ಈ ನದಿಯ ಮಧ್ಯದಲ್ಲಿ ತಿರುಗಾಡಲು ಇರುವ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಮೊಳಗಾಲುದ್ದ ಹರಿಯುವ ನೀರಿನಲ್ಲಿ ನಡೆದುಕೊಂಡು ಹೋಗುವಾಗ ಹಸು ಎಳೆದ ಪರಿಣಾಮ ರಸ್ತೆ ಪಕ್ಕದಲ್ಲಿರುವ ಗುಂಡಿಗೆ ಕಾಳಮ್ಮ ಬಿದ್ದಿದ್ದಾರೆ. ಅವರನ್ನು ಕಾಪಾಡಲು ಹೋದ ಪತಿ ವೆಂಕಟೇಶ್ ಕೂಡ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ.