ಚಿತಾಗಾರದ ಮುಂದೆ ಬಿಕ್ಕಿಬಿಕ್ಕಿ ಅತ್ತ ಪೊಲೀಸ್​! ಇದು ಕರೊನಾದ ಕರಾಳ ದೃಶ್ಯ

corona
Published on

ಬೆಂಗಳೂರು: ಸುಮನಹಳ್ಳಿ ಚಿತಾಗಾರದ ಮುಂದೆ ಕರೊನಾ ವಾರಿಯರ್ಸ್​ ಬಿಕ್ಕಿಬಿಕ್ಕಿ ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ರಾತ್ರಿ 10 ಗಂಟೆಯಿಂದ ಸುಮನಹಳ್ಳಿ ಚಿತಾಗಾರದ ಬಳಿ ತಾಯಿ ಲಕ್ಷ್ಮೀ(58) ಅವರ ಶವ ಇಟ್ಟುಕೊಂಡು ಕಾದರೂ ಅಂತ್ಯ ಸಂಸ್ಕಾರ ಆಗಿದ್ದು ಬೆಳಗ್ಗೆ 7.30. ಈ ವೇಳೆ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ ಮೃತಳ ಪುತ್ರ, ಕರೊನಾ ಸೋಂಕು ತಗುಲಿದ ನನ್ನ ತಾಯಿಗೆ ಚಿಕಿತ್ಸೆ ಕೊಡಿಸಲು 100ಕ್ಕೂ ಹೆಚ್ಚು ಆಸ್ಪತ್ರೆಗೆ ಅಲೆದರೂ ಬೆಡ್ ಸಿಗಲಿಲ್ಲ. ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಕಾಲಿಗೆ ಬಿದ್ರೂ ಬೆಡ್ ಕೊಡಲಿಲ್ಲ. ಕೊನೆಗೆ ವಿಜಯನಗರ ಮಾರುತಿ ಆಸ್ಪತ್ರೆಗೆ ದಾಖಲಿಸಿದೆ. ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದೆ ನನ್ನ ತಾಯಿ ನಿನ್ನೆಕೊನೆಯುಸಿರೆಳೆದರು. ಒಂದೇ ದಿನಕ್ಕೆ ಆಸ್ಪತ್ರೆಯವರು 1.14 ಲಕ್ಷ ರೂಪಾಯಿ ಬಿಲ್ ಮಾಡಿದ್ದಾರೆ ಎಂದು ಬಿಕ್ಕಿಬಿಕ್ಕಿ ಅತ್ತರು. ಮೃತಪಟ್ಟ ಮಹಿಳೆಯ ಗಂಡ ಮತ್ತು ಮಗ ಇಬ್ಬರೂ ಪೊಲೀಸ್​ ಸಿಬ್ಬಂದಿ.

ಲಕ್ಷ್ಮೀಯ ಅಂತ್ಯಸಂಸ್ಕಾರ ಮಾಡಲು ಬುಧವಾರ ರಾತ್ರಿ 10 ಗಂಟೆಯಿಂದ ಸುಮನಹಳ್ಳಿ ಚಿತಾಗಾರದ ಬಳಿ ಪೊಲೀಸ್ ಸಿಬ್ಬಂದಿಯಾದ ತಂದೆ-ಮಗ ಇಬ್ಬರೂ ಕಾದಿದ್ದಾರೆ. ತಾಯಿ ಕಳೆದುಕೊಂಡು ಪೊಲೀಸ್ ಸಿಬ್ಬಂದಿ, ಆಂಬುಲೆನ್ಸ್ ತಬ್ಬಿ ಕಣ್ಣೀರು ಹಾಕಿದರು. ಕೊನೆಗೆ ಅಂತ್ಯಸಂಸ್ಕಾರ ಗುರುವಾರ ಬೆಳಗ್ಗೆ 7.30ಕ್ಕೆ ನಡೆದಿದೆ.

ಮೃತರ ಸಂಬಂಧಿ ಅನಿಲ್ ಕುಮಾರ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಕರೊನಾ ವಾರಿಯರ್ಸ್ ಅಂತಾರೆ, ಅವರಿಗೇ ಈ ಗತಿ ಬಂದಿದೆ. ಸರ್ಕಾರಕ್ಕೆ ನಿಜವಾಗಿ ನಾಚಿಕೆಯಾಗಬೇಕು. ಎಷ್ಟೇ ಅಲೆದರೂ ಒಂದು ವೆಂಟಿಲೇಟರ್ ಬೆಡ್ ಸಿಗಲಿಲ್ಲ. ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದರು. ಮೃತರ ಪತಿ ನಿವೃತ್ತ ಪೊಲೀಸ್ ಸಿಬ್ಬಂದಿ, ಮಗ ಹಲಸೂರು ಗೇಟ್ ಪೊಲೀಸ್​ ಠಾಣಾ ಸಿಬ್ಬಂದಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net