

ರಾಮನಗರ: ಮನೆ ಬಾಗಿಲಿಗೆ ಗಿಫ್ಟ್ ಕೂಪನ್ ಬಂದಿದೆ. ಇನ್ನು ಗಿಫ್ಟ್ ಕೊಡದೇ ಇರ್ತಾರಾ ಅಂತಾ ಅಪ್ಪಿತಪ್ಪಿ ಯಾಮಾರಿದ್ರೆ ನಿಮ್ಮ ಹಣಕ್ಕೆ ನಾಜೂಕಾಗಿಯೇ ಕತ್ತರಿ ಬೀಳುತ್ತೆ ಜೋಕೆ!
ಹೌದು, ಆನ್ಲೈನ್ ವಂಚನೆಯ ಹೊಸ ರೂಪ ಗಿಫ್ಟ್ ಕೂಪನ್! ಈ ಹೆಸರಲ್ಲಿ ವಂಚಿಸುವ ಜಾಲ ಸಕ್ರಿಯವಾಗಿದೆ. ಮನೆ ಬಾಗಿಲಿಗೆ ಬಂದ ಗಿಫ್ಟ್ ಕವರ್ ನೋಡಿ ಮೋಸ ಹೋಗಿ ಹಲವರು ಈಗಾಗಲೇ ಹಣ ಕಳೆದುಕೊಂಡಿದ್ದಾರೆ. ಇಂತಹದ್ದೇ ಪ್ರಕರಣ ರಾಮನಗರ ಜಿಲ್ಲೆಯಲ್ಲೂ ಬೆಳಕಿಗೆ ಬಂದಿದೆ.
ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಆನೇಕಲ್ ಮುಖ್ಯರಸ್ತೆ ನಿವಾಸಿ, ವೃತ್ತಿಯಲ್ಲಿ ಚಾಲಕರಾಗಿರುವ ಶಿವಕುಮಾರ್ ಆನ್ಲೈನ್ ವಂಚಕರ ಮೋಸಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಇವರ ಮನೆಗೆ ಸ್ಪೀಡ್ಪೋಸ್ಟ್ ಬಂದಿದ್ದು, ಇದರಲ್ಲಿ ಆನ್ಲೈನ್ ಶಾಪಿಂಗ್ ಎಂದು ನಮೂದಿಸಿದ ಕೂಪನ್ ಇರಿಸಲಾಗಿತ್ತು. ಕುತೂಹಲಗೊಂಡ ಶಿವಕುಮಾರ್ ಪತ್ನಿ, ಕೂಪನ್ನಲ್ಲಿದ್ದ ನಂಬರ್ಗೆ ಕರೆ ಮಾಡಿದಾಗ ನಿಮಗೆ ಬಹುಮಾನವಾಗಿ ಕಾರು ಬಂದಿದೆ. ಕಾರು ಬೇಕಾ? ಅಥವಾ 14.80 ಲಕ್ಷ ರೂ. ಬೇಕಾ? ಎಂದು ಪ್ರಶ್ನಿಸಿದ್ದಾರೆ. ಖುಷಿಪಟ್ಟ ಶಿವಕುಮಾರ್ ಕಾರು ಕೊಡಿ ಎಂದಿದ್ದಾರೆ.
ಕರೆ ಕಡಿತಗೊಳಿಸಿದ ವಂಚಕರು, ಮರುದಿನ ಕರೆ ಮಾಡಿ ಡಿಎಲ್, ಆಧಾರ್ ಕಾರ್ಡ್ಗಳನ್ನು ಮತ್ತೊಂದು ನಂಬರ್ಗೆ ವಾಟ್ಸ್ಆ್ಯಪ್ ಮೂಲಕ ತರಿಸಿಕೊಂಡಿದ್ದಾರೆ. ನಂತರ ಕಾರ್ನ ಆರ್ಟಿಒ ಶುಲ್ಕವೆಂದು 25600 ರೂ., ಟ್ರಾನ್ಸ್ಪೋರ್ಟ್ ಖರ್ಚು ಎಂದು 20 ಸಾವಿರ ರೂ., ಇತರ ಖರ್ಚು ಎಂದು 10 ಸಾವಿರ ರೂ., ನಂತರ ಡೀಸೆಲ್ಗೆ 10 ಸಾವಿರ ರೂ.ಗಳನ್ನು ಕೇಳಿ ಎಲ್ಲವನ್ನೂ ಫೋನ್ಪೇ ಮೂಲಕವಾಗಿ ಖಾತೆಗೆ ಹಾಕಿಸಿಕೊಂಡಿದ್ದಾರೆ. ಕೆಲ ದಿನ ಕಳೆದರೂ ಮನೆ ಬಾಗಿಲಿಗೆ ಕಾರು ಬರದಿದ್ದಾಗ ಅನುಮಾನಗೊಂಡು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.