

ಬೈಂದೂರು: ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರಾವಳಿ ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವ ಅದ್ದೂರಿ ಜನಪದ ಉತ್ಸವ ನೆರವೇರಿತು. ಇಲ್ಲಿನ ಜನರ ಬದುಕಿನೊಂದಿಗೆ ಬೆಸೆದಿರುವ ಕಡಲ ಕಿನಾರೆಯ ಸಂಸ್ಕೃತಿಯ ಅನನ್ಯತೆಯನ್ನು ಪ್ರತಿಬಿಂಬಿಸಿತು. ತೆಂಗಿನಸಿರಿ ಅರಳಿಸುವ ಮೂಲಕ ಶಾಸಕ ಗುರುರಾಜ ಗಂಟಿಹೊಳೆ ಜನಪದ ಉತ್ಸವ ಉದ್ಘಾಟಿಸಿದರು.
ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ನಮ್ಮೂರಿನ ಸರ್ಕಾರಿ ಕಾಲೇಜಿನಲ್ಲಿ ಇಷ್ಟೊಂದು ಸಂಭ್ರಮದಿಂದ ಜನಪದ ಉತ್ಸವ ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ. ಕಾಲೇಜಿನ ಇಷ್ಟು ವರ್ಷಗಳ ಇತಿಹಾಸದಲ್ಲೇ ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿದ್ದು, ಕಾಲೇಜಿಗೆ ಹಬ್ಬದ ಕಳೆ ಬಂದಿದೆ ಎಂದರು.
ಕಾಲೇಜಿನ ಗೋಡೆಯ ಮೇಲೆ ಜನಪದ ಶೈಲಿಯ ವರ್ಲಿ ಚಿತ್ರ ಬಿಡಿಸಿದ ಆದಿತ್ಯ ಮತ್ತು ತಂಡ ಹಾಗೂ ಪ್ರಾಧ್ಯಾಪಕ ವೃಂದಕ್ಕೆ ಅಭಿನಂದಿಸಿ, ಕಾಲೇಜಿಗೆ ವರ್ಲಿ ಚಿತ್ರ ಬಿಡಿಸಲು ಮತ್ತು ಕಾಲೇಜಿಗೆ ಸುಣ್ಣ-ಬಣ್ಣದ ವ್ಯವಸ್ಥೆಗೆ ವೈಯಕ್ತಿಕವಾಗಿ 3 ಲಕ್ಷ ರೂ. ಹಾಗೂ ದಾನಿಗಳಿಂದ 2 ಲಕ್ಷ ರೂ. ಕೊಡಿಸುವುದಾಗಿ ಶಾಸಕರು ಘೋಷಿಸಿದರು. ಅನಾರೋಗ್ಯದಿಂದ ಬಳಲುತ್ತಿರುವ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳ ತಾಯಿಯ ಚಿಕಿತ್ಸೆಗೆ ಅಗತ್ಯ ಸಹಾಯ ಮಾಡುವ ಭರವಸೆ ನೀಡಿದರು.
ಪ್ರಾಂಶುಪಾಲ ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ಕರ್ನಾಟಕ ಜಾನಪದ ಪರಿಷತ್ತು ಬೈಂದೂರು ವಲಯ ಅಧ್ಯಕ್ಷ ಗಿರೀಶ್ ಬೈಂದೂರು, ಸುರಭಿ ಅಧ್ಯಕ್ಷ ಆನಂದ ಮದ್ದೋಡಿ, ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಮುತ್ತಯ್ಯ ಪೂಜಾರಿ, ಬೈಂದೂರು ವಲಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಗಣಪತಿ ಹೋಬಳಿದಾರ್, ಉದ್ಯಮಿ ಶಿರೂರು ಪ್ರಸಾದ್ ಪ್ರಭು, ಸುರಭಿ ನಿರ್ದೇಶಕ ಸುಧಾಕರ ಪಿ. ಉಪಸ್ಥಿತರಿದ್ದರು.
ಹರ್ಷಿತಾ ಮತ್ತು ಸಂಗೀತಾ ಪ್ರಾರ್ಥಿಸಿದರು. ಸುಹರ್ಷಿಣಿ ಸ್ವಾಗತಿಸಿದರು. ಜನಪದ ಉತ್ಸವದ ಉಸ್ತುವಾರಿ ಡಾ.ಶಿವಕುಮಾರ ಪಿ.ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಂಸ್ಕೃತಿಕ ಕಾರ್ಯದರ್ಶಿ ಅಕ್ಷತಾ ಎಲ್. ಹಾಗೂ ನಾಗೇಂದ್ರ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಮಂಜುನಾಥ ಡಿ. ವಂದಿಸಿದರು.
ಅಡಕೆ ಮತ್ತು ತೆಂಗಿನ ಮಡಲುಗಳಿಂದ ವಿದ್ಯಾರ್ಥಿಗಳೇ ಮಾಡಿದ ಆಕರ್ಷಕ ಸ್ವಾಗತ ಗೋಪುರ, ಮುಳಿಹುಲ್ಲಿನ ಚಪ್ಪರ, ಕರಾವಳಿ ಶೈಲಿಯ ಸುಗ್ಗಿ ಕೊಯ್ಲಿನ ನಂತರದ ಹೋಳಿಪೂಜೆ, ತಿರಿಪೂಜೆ, ಹಡಿಮಂಚ ಪೂಜೆ ಕಣ್ಮನ ಸೆಳೆಯುವಂತಿತ್ತು. ಕೃಷಿ ಸಲಕರಣೆಗಳು, ಮೀನುಗಾರಿಕೆ ಹಾಗೂ ಮನೆಗಳಲ್ಲಿ ನಿತ್ಯ ಬಳಕೆಯಲ್ಲಿದ್ದ ಪುರಾತನ ವಸ್ತುಗಳ ಪ್ರದರ್ಶನ, ವರ್ಲಿ ಚಿತ್ರದಿಂದ ಅಲಂಕೃತಗೊಂಡ ಗೋಡೆ, ಇಡೀ ಕಾಲೇಜು ಹಸಿರು ಮಾವಿನ ತೋರಣ ಹಾಗೂ ಹೂಗಳಿಂದ ಮಧುಮಗಳಂತೆ ಸಿಂಗರಿಸಲ್ಪಟ್ಟು ಕಂಗೊಳಿಸಿತು. ವಿದ್ಯಾರ್ಥಿಗಳಿಗೆ ಜನಪದ ಗೀತೆ, ಜನಪದ ನೃತ್ಯ ಸ್ಪರ್ಧೆ, ಯಕ್ಷಗಾನ, ನಡಿಗೆ ಸ್ಪರ್ಧೆ, ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಸಾಂಪ್ರದಾಯಿಕ ವೇಷಭೂಷಣ ತೊಟ್ಟು ಸಂಭ್ರಮಿಸಿದರು. ಚೆನ್ನೆಮಣೆ, ಕುಂಟೆಬಿಲ್ಲೆ, ಚೌಕಬಾರಾ, ಲಗೋರಿ, ಬುಗುರಿ ಆಟಗಳು ಹಳೆಯದನ್ನು ನೆನಪಿಸಿದವು.