

ಮೈಸೂರು: ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆರಂಭದಲ್ಲಿ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಮೈಸೂರು ಅರಮನೆ ಅಂಗಳದಲ್ಲಿ ಪುಷ್ಪಪ್ರದರ್ಶನ ಏರ್ಪಡಿಸಲಾಗಿದ್ದು, ನೋಡುಗರ ಮನ ಸೆಳೆಯುತ್ತಿದೆ. ಜಿಲ್ಲಾಡಳಿತ, ಆರಮನೆ ಆಡಳಿತ ಮಂಡಳಿಯಿಂದ ಆಯೋಜಿಸಿರುವ ಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶನಿವಾರ ಚಾಲನೆ ನೀಡಿದರು. ಜನವರಿ 2ರವರೆಗೆ ಪುಷ್ಪ ಪ್ರದರ್ಶನವಿದ್ದು, ಬೆಳಗ್ಗೆ 10ರಿಂದ ರಾತ್ರಿ 8.30ರವರೆಗೆ ವೀಸಲು ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಅಂದಹಾಗೆ ಇಲ್ಲಿ ಏನೆಲ್ಲಾ ಇದೆ ಗೊತ್ತಾ?
ಅರಮನೆ ಅಂಗಳದಲ್ಲಿ ಅಯೋಧ್ಯೆ: ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ವಿವಿಧ ಹೂವುಗಳಿಂದ ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರತಿಕೃತಿ ವಿಶೇಷವಾಗಿದೆ. 70*32*13 ಅಡಿ ಅಳತೆಯಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದ ಮಾದರಿಯನ್ನು ನಿರ್ಮಿಸಲಾಗಿದೆ. ಸುಮಾರು 4 ಲಕ್ಷ ಹೂಗಳಿಂದ ಕೆಂಪು, ಹಳದಿ, ಬಿಳಿ ಹೂವುಗಳಿಂದ ರಾಮ ಮಂದಿರ ನಿರ್ಮಾಣ ಮಾಡಲಾಗಿದ್ದು, ರಾಮ, ಲಕ್ಷ್ಮಣ, ಸೀತೆ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ಹೂನಿಂದ ಚಾಮುಂಡೇಶ್ವರಿ, ನಂದಿ ಮತ್ತು ಮಹಿಷಾಸುರ, ಶ್ರೀಜಯಚಾಮರಾಜ ಒಡೆಯರ್, ಹೂವಿನ ಪಲ್ಲಕ್ಕಿಯಲ್ಲಿ ಮಹಾರಾಣಿಯನ್ನು ಹೊತ್ತ ಸೇವಕರು, ಆನೆಗಳನ್ನು ಖೆಡ್ಡಾಗೆ ಕೆಡವುದು, ಪ್ರವೇಶ ದ್ವಾರದಲ್ಲಿ ಎರಡು ಕಡೆ ಬೃಹತ್ ಗದೆಯ ಮಾದರಿ ಗಮನ ಸೆಳೆಯುತ್ತಿವೆ. ರೈತನ ನೆನಪಿಗಾಗಿ ನೇಗಿಲು ಹೊತ್ತ ರೈತ, ಚಿತ್ರದುರ್ಗದ ಕಲ್ಲಿನ ಕೋಟೆಯ ಒನಕೆ ಓಬವ್ವ, ಚಾಮರಾಜ ಒಡೆಯರ್, ನಂದಿ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಗಾಂಧೀಜಿ ಅಂದು ನಡೆಸಿದ ಕ್ವಿಟ್ ಇಂಡಿಯಾ ಚಳವಳಿ ಮಾದರಿ, ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಆಕೃತಿ, ಭಾರತೀಯ ಸೇನಾ ವಾಯುಪಡೆಯ ಯುದ್ಧವಿಮಾನ ಹಾಗೂ ಪರಮ ವೀರ ಚಕ್ರ ಪ್ರಶಸ್ತಿ ಪುರಸತ ಅಭಿನಂದನ್, ಒಲಿಂಪಿಕ್ನಲ್ಲಿ ಪದಕ ಪಡೆದ ನೀರಜ್ ಚೋಪ್ರಾ, ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸಲು ನಿಯಂತ್ರಣ ಕ್ರಮಗಳ ಮಾದರಿ ಚಿತ್ರ, ಮಕ್ಕಳ ಆಕರ್ಷಣೆಗಾಗಿ ಕ್ರೀಡೆಗಳ ಮಾದರಿಯಲ್ಲಿ ಕಾರ್ಟೂನ್ ಚಿತ್ರಗಳಾದ ಹಾಕಿ, ಫುಟ್ಬಾಲ್ ಚಿತ್ರಗಳನ್ನು ಹೂವುಗಳಿಂದ ಅಲಂಕರಿಸಲಾಗಿದೆ. ಮೈಸೂರು ಮಹಾರಾಜರ ಇತಿಹಾಸ ಪರಿಚಯಿಸುವ ಫೋಟೋ ಗ್ಯಾಲರಿಯೂ ಗಮನ ಸೆಳೆಯುತ್ತದೆ.
ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದಿಂದ ಗಿಡಮೂಲಿಕೆಗಳ ಪ್ರದರ್ಶನ, ನಾಡಿ ಪರೀಕ್ಷೆ ಮಾಡುವುದು, ಆಯುರ್ವೇದದಲ್ಲಿ ಆರೋಗ್ಯಯುತ ಜೀವನ ಹಾಗೂ ಆಯುರ್ವೇದದ ಇತರ ಮಾಹಿತಿ ನೀಡಲಾಗುತ್ತದೆ. ಫಲಪುಷ್ಪ ಪ್ರದರ್ಶನ ವೀಕ್ಷಿಸುವ ಸಮಯದಲ್ಲಿ ಶ್ರೀಜಯಚಾಮರಾಜ ಒಡೆಯರ್ ರಚಿಸಿರುವ ಕೀರ್ತನೆಗಳನ್ನು ಕೇಳುವ ಅವಕಾಶವೂ ಉಂಟು.
ಅರಮನೆ ಅಂಗಳಲ್ಲಿ 10 ಲಕ್ಷ ಹೂಗಳಿಂದ ವಿವಿಧ ಕಲಾಕೃತಿಗಳನ್ನು ನಿರ್ಮಿಸಲಾಗಿದೆ. 15 ಸಾವಿರಕ್ಕೂ ಹೆಚ್ಚು ಹೂ ಕುಂಡಗಳಲ್ಲಿ ವಿಭಿನ್ನ ರೀತಿಯ ಅಲಂಕಾರಿಕ ಹೂಗಳಾದ ಮಾರಿಗೋಲ್ಡ್, ಸಾಲ್ವಿಯ, ಡೇಲಿಯ, ಪಿಟೋನಿಯ, ಸೇವಂತಿಗೆ, ಕೋಲಿಯಸ್, ಸಿಲೋಷಿಯ, ನಸ್ಟರ್ಸಿಯಂ, ಆಂಟಿರೈನಂ, ಬೋನ್ಸಾಯ್ ಸೇರಿದಂತೆ 32 ಜಾತಿಯ ಹೂವಿನ ಗಿಡಗಳು ಕಣ್ಮನ ಸೆಳೆಯುತ್ತಿವೆ. ಅಲ್ಲದೆ ವಿವಿಧ ಬಣ್ಣಗಳ ಗುಲಾಬಿ, ಕ್ರೆಸಾಂಥಿಮಮ್, ಪಿಂಗ್ಪಾಂಗ್, ಕಾರ್ನೆಷನ್, ಆಸ್ಟ್ರಮೇರಿಯ, ರ್ಜಬೆರಾ, ಆಂಥೋ ರಿಯಮ್, ಆರ್ಕಿಡ್ಸ್, ಬ್ಲೂ ಡೈಸಿ, ಡ್ರೆಸಿನಾ ಇತರ ಅಲಂಕಾರಿಕ ಹೂಗಳು, ಊಟಿಯ ಕಟ್ ಫ್ಲವರ್ಗಳಿಂದ ವಿವಿಧ ಆಕೃತಿಗಳನ್ನು ನಿರ್ಮಿಸಲಾಗಿದೆ.
ದೀಪಾಲಂಕಾರ: ಫಲಪುಷ್ಪ ಪ್ರದರ್ಶನದ ಅಂಗವಾಗಿ ಅರಮನೆಯಲ್ಲಿ ಡಿ.27ರ ವರೆಗೆ ಸಂಜೆ 7ರಿಂದ 9 ಗಂಟೆವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಜೆ 7ರಿಂದ 8.30ರವರೆಗೆ ವಿದ್ಯುತ್ ದೀಪಾಲಂಕಾರ ಇರಲಿದೆ.
ಲಸಿಕೆ ಪಡೆದಿದ್ದರೆ ಮಾತ್ರ ಪ್ರವೇಶ: ಪುಷ್ಪಪ್ರದರ್ಶನಕ್ಕೆ ಉಚಿತ ಪ್ರವೇಶ ಇದ್ದರೂ, ಕೋವಿಡ್ ಎರಡು ಡೋಸ್ ಲಸಿಕೆ ಪಡೆದಿರುವವರಿಗೆ ಮಾತ್ರ ಅರಮನೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ಲಸಿಕೆ ಪಡೆದಿರುವ ಪ್ರಮಾಣ ಪತ್ರ ಪ್ರದರ್ಶಿಸಿದರೆ ಮಾತ್ರ ಅವಕಾಶ ನೀಡಲಾಗುತ್ತದೆ. ಕೋಟೆ ಆಂಜನೇಸ್ವಾಮಿ ದೇವಾಲಯದ(ಉತ್ತರ ದ್ವಾರ) ಗೇಟ್ ಹಾಗೂ ವರಹಾ ಗೇಟ್ನಿಂದ ಪ್ರವೇಶವಿದೆ. ದ್ವಾರದ ಬಳಿ ಇರುವ ಮೊಬೈಲ್ ಸಂಖ್ಯೆಗೆ ಮಿಸ್ಕಾಲ್ ನೀಡಿದರೆ ಬರುವ ಪ್ರಮಾಣ ಪತ್ರವನ್ನು ತೋರಿಸಿ ಮುಂದೆ ಹೋಗಬೇಕು.