

* ಕೇಂದ್ರದ ನಿಯಮದಿಂದ ವಾಹನಗಳು ಗುಜರಿಗೆ
* ಬೇಸಿಗೆ ಅವಧಿಯಲ್ಲಿ ಅವಘಡ ನಿರ್ವಹಣೆ ಕಷ್ಟ
ಗಂಗಾಧರ್ ಬೈರಾಪಟ್ಟಣ ರಾಮನಗರ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ 15 ವರ್ಷ ಮೀರಿದ ವಾಹನಗಳ ಬಳಕೆ ಮೇಲಿನ ನಿಷೇಧ‘ ಅಗ್ನಿ ಶಾಮಕ ಇಲಾಖೆಯ ಸಮಸ್ಯೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಲೇ ಇದೆ. ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 15 ವರ್ಷಗಳನ್ನು ಮೀರಿದ ವಾಹನಗಳ ಬಳಕೆಯನ್ನು ನಿಷೇಧಿಸಿದೆ. ಇದರ ಪರಿಣಾಮ ನೇರವಾಗಿ ರಾಜ್ಯದ ಅಗ್ನಿ ಶಾಮಕ ಇಲಾಖೆ ಮೇಲೆಯೇ ಆಗಿದ್ದು, ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಕಡಿಮೆ ಆಗಿ ಅವಘಡಗಳು ಸಂಭವಿಸಿದಾಗ ಪರಿತಪಿಸುವಂತೆ ಆಗುತ್ತಿದೆ.
ಕೇಂದ್ರದ ನಿಯಮದಂತೆ ಅವಧಿ ಮೀರಿದ ವಾಹನ ಬಳಕೆಯನ್ನು ಅಗ್ನಿ ಶಾಮಕ ಇಲಾಖೆ ನಿಲ್ಲಿಸಿದೆ. ಆದರೆ, ಹೊಸ ವಾಹನಗಳು ಅಗತ್ಯ ಸಲಕರಣೆಗಳೊಂದಿಗೆ ವಿನ್ಯಾಸಗೊಂಡು ಅಗ್ನಿ ಶಾಮಕ ಇಲಾಖೆಗೆ ಸೇರಬೇಕು. ಅಲ್ಲಿಯವರೆಗೂ 15 ವರ್ಷವಾಗಿರುವ ಹಾಗೂ ಸುಸ್ಥಿತಿಯಲ್ಲಿರುವ ವಾಹನಗಳನ್ನು ಬಳಕೆ ಮಾಡಲು ಅವಕಾಶ ಮಾಡಿಕೊಂಡುವಂತೆ ರಾಜ್ಯ ಗೃಹ ಇಲಾಖೆ ಒಂದು ವರ್ಷದ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಅಂದು ರಾಜ್ಯದಲ್ಲಿ ಅಗ್ನಿ ಶಾಮಕ ಇಲಾಖೆಗೆ ಸೇರಿದ 443 ವಾಹನಗಳು 15 ವರ್ಷ ಮತ್ತು ಅದಕ್ಕಿಂತ ಹಿಂದಿನ ವಾಹನಗಳು. ವಾಹನಗಳ ಬಳಕೆಗೆ ಅವಕಾಶ ನೀಡುವಂತೆ ಕೋರಿತ್ತು. ಆದರೆ, ಇದಕ್ಕೆ ಪರಿಹಾರ ಮಾತ್ರ ಇನ್ನೂ ಸಿಗಲೇ ಇಲ್ಲ.
ಜಿಲ್ಲೆಯಲ್ಲಿ ಒಟ್ಟು 5 ತಾಲೂಕುಗಳಿದ್ದು, ಹಾರೋಹಳ್ಳಿ ಹೊರತುಪಡಿಸಿ ಉಳಿದ ನಾಲ್ಕೂ ತಾಲೂಕುಗಳಲ್ಲಿ ತಲಾ ಒಂದೊಂದು ಅಗ್ನಿ ಶಾಮಕ ಠಾಣೆಗಳು ಇವೆ. ಇಲ್ಲಿ ಕೇಂದ್ರ ಸರ್ಕಾರದ ಆದೇಶವರೆಗೂ ತಲಾ 2 ಅಗ್ನಿ ಶಾಮಕ ವಾಹನಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ, 15 ವರ್ಷಗಳನ್ನು ಮೀರಿದ 5 ವಾಹನಗಳು ಇರುವ ಕಾರಣ ಇದ್ದ 8 ವಾಹನಗಳಲ್ಲಿ ಕೇವಲ 3 ವಾಹನಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿವೆ. ಇದರಲ್ಲಿ ಕನಕಪುರ ಠಾಣೆಯ ಒಂದು ವಾಹನ ಫೆಬ್ರವರಿಯಲ್ಲಿ 15 ವರ್ಷ ಅವಧಿ ಮುಗಿಸಿ ಗ್ಯಾರೇಜ್ ಸೇರಲಿದೆ. ಇದರೊಂದಿಗೆ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ತಲಾ ಒಂದು ವಾಹನ ಹೊರತುಪಡಿಸಿ, ಕನಕಪುರ ಮತ್ತು ಮಾಗಡಿಯಲ್ಲಿ ಯಾವುದೇ ವಾಹನಗಳು ಇರುವುದಿಲ್ಲ.
ಇದರ ಜತೆಗೆ ಮತ್ತೊಂದು ದುರಂತವೆಂದರೆ ದೇಶದ ಎರಡು ಪ್ರಮುಖ ಕೈಗಾರಿಕೆ ಕ್ಷೇತ್ರಗಳನ್ನು ಹೊಂದಿದ್ದರೂ ರಾಮನಗರ ಜಿಲ್ಲೆಯಲ್ಲಿ ಯಾವುದೇ ಅಗ್ನಿ ಶಾಮಕ ಠಾಣೆ ಇಲ್ಲದಿರುವುದು. ಬಿಡದಿ ಮತ್ತು ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಹಲವು ಅಂತಾರಾಷ್ಟ್ರೀಯ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಆಯಾ ಕಂಪನಿಗಳು ತಮ್ಮ ವ್ಯಾಪ್ತಿಗೆ ಅನುಗುಣವಾಗಿ ಅಗ್ನಿ ಶಾಮಕ ಸಾ‘ನಗಳನ್ನು ಹೊಂದಿರುವುದು ಬಿಟ್ಟರೆ, ‘ಭಾರೀ ಅಗ್ನಿ ಅವಘಡ ಏನಾದರೂ ಸಂಭವಿಸಿದರೆ, ಬೆಂಗಳೂರು ಸೇರಿ ಜಿಲ್ಲೆಯ ಇತರ ಠಾಣೆಗಳಿಂದಲೇ ಅಗ್ನಿ ಶಾಮಕ ವಾಹನಗಳು ಬೆಂಕಿ ನಂದಿಸಲು ಬರಬೇಕಾದಂತಹ ಶೋಚನೀಯ ಪರಿಸ್ಥಿತಿ ಇದೆ.
ಇತ್ತೀಚೆಗೆ ಚನ್ನಪಟ್ಟಣದ ವಂದಾರಗುಪ್ಪೆಯ ಬಳಿ ನಿರ್ಮಾಣ ಮಾಡಲಾಗಿರುವ ಕಸ ಸಂಗ್ರಹಾ ಘಟಕ ಬೆಂಕಿಗೆ ಆಹುತಿಯಾದಗಳೂ ಬೆಂಗಳೂರು ಸೇರಿ ಇತರೆ ಕಡೆಗಳಿಂದ ಬಂದಿದ್ದ ಅಗ್ನಿ ಶಾಮಕ ವಾಹನಗಳು ಕಾರ್ಯಾಚರಣೆ ನಡೆಸಿದ್ದವು.
ಮಳೆ ಚೆನ್ನಾಗಿ ಆದ ವರ್ಷದಲ್ಲಿ ಬರುವ ಬೇಸಿಗೆಯು ಅಗ್ನಿ ಶಾಮಕ ಇಲಾಖೆ ಪಾಲಿಗೆ ಕಷ್ಟಕರವಾಗಿರುತ್ತದೆ. ಈ ಸಂದಭರ್ದಲ್ಲಿ ಅಗ್ನಿ ಅವಘಡಗಳು ಹೆಚ್ಚಾಗುವ ಕಾರಣ ಸಾಮಾನ್ಯವಾಗಿ ಬೆಂಕಿ ನಂದಿಸಲು ಕರೆಗಳು ಹೆಚ್ಚಾಗಿ ಬರುತ್ತವೆ. ಆದರೆ, ಮೂಲ ಅಗತ್ಯವಾಗಿರುವ ಅಗ್ನಿ ಶಾಮಕ ವಾಹನಗಳೇ ಇಲ್ಲದಿದ್ದರೆ ಅಪಾಯವನ್ನು ಊಹಿಸಲೂ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ಗಂಭೀರವಾಗಿ ಚರ್ಚಿಸಿ, ಬಳಕೆಗೆ ಯೋಗ್ಯವಾಗಿದ್ದರೂ 15 ವರ್ಷ ಅವಧಿ ಮೀರಿರುವ ವಾಹನಗಳ ಬಳಕೆಗೆ ಅನುಮತಿ ಪಡೆದುಕೊಳ್ಳಬೇಕಿದೆ.
ಸದ್ಯಕ್ಕೆ ರಾಮನಗರ ಜಿಲ್ಲೆಯ ನಾಲ್ಕು ಠಾಣೆಗಳಲ್ಲಿ ಎರಡು ವಾಹನಗಳು ಕಾರ್ಯಾಚರಣೆ ನಡೆಸುತ್ತಿವೆ. ಫೆಬ್ರವರಿಯಲ್ಲಿ ಮತ್ತೊಂದು ವಾಹನ ನಿಲುಗಡೆಯಾಗಲಿದೆ. ಎರಡೇ ವಾಹನಗಳು ಬಳಕೆಗೆ ಸಿಗಲಿವೆ. ಮಂಜುನಾಥ್, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ, ರಾಮನಗರ