

ಬೆಂಗಳೂರು: ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಅವರ ತಮ್ಮ ರಾಘವೇಂದ್ರ ಡಿ. ಚೆನ್ನಣ್ಣನವರ್ ವಿರುದ್ಧ ವರದಕ್ಷಣೆ ಕಿರುಕುಳ ಆರೋಪದ ಮೇಲೆ ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಅಂಜಾನಪುರದ ಎಲ್. ರೋಜಾ(26) ಎಂಬಾಕೆ ತನ್ನ ಪತಿ ರಾಘವೇಂದ್ರ ಡಿ. ಚೆನ್ನಣ್ಣನವರ್ ಮತ್ತು ಹನುಮಂತ ತಿಮ್ಮಾಪುರ ಎಂಬುವರ ವಿರುದ್ಧ ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ. ಘಟನೆ ನಡೆದಿರುವುದು ಗದಗ ಜಿಲ್ಲೆಯಾದ ಕಾರಣಕ್ಕೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯನಗರ ಅತ್ತಿಗುಪ್ಪೆ ಇಂದಿರಾ ಕಾಲನಿಯಲ್ಲಿ ನೆಲೆಸಿರುವ ರೋಜಾ, ತನ್ನ ದೂರಿನಲ್ಲಿ ವರದಕ್ಷಣೆ ಕಿರುಕುಳ ಆರೋಪದ ಮೇಲೆ ದೂರು ನೀಡಿದ್ದಾರೆ. 2016ರಲ್ಲಿ ರಾಘವೇಂದ್ರ ಜತೆ ಮದುವೆ ಆಗಿತ್ತು. ಇದಕ್ಕೂ ಮೊದಲು ರುಕ್ಮೀಣಿ ಎಂಬಾಕೆ ಜತೆ ರಾಘವೇಂದ್ರನಿಗೆ ಅಕ್ರಮ ಸಂಬಂಧವಿತ್ತು.
ಇದನ್ನು ಪ್ರಶ್ನಿಸಿದಾಗ ಕೌಟುಂಬಿಕ ಕಲಹ ಉಂಟಾಗಿತ್ತು. ವಿಷಯ ಗೊತ್ತಾಗಿ ರವಿ ಡಿ. ಚೆನ್ನಣ್ಣನವರ್ ಅವರು ನನ್ನ ಮತ್ತು ನನ್ನ ಪತಿಯನ್ನು, ಕುಟುಂಬ ಸದಸ್ಯರನ್ನು ಕರೆದು ಮಾತುಕತೆ ನಡೆಸಿದರು. ರೋಜಾ ಮದುವೆಗೂ ಮೊದಲೇ ರುಕ್ಮೀಣಿಯನ್ನು ವಿವಾಹವಾಗಿದ್ದೆ. ಇಬ್ಬರ ಜತೆಗೂ ಸಂಸಾರ ನಡೆಸುತ್ತೇನೆ ಎಂದು ರಾಘವೇಂದ್ರ ತಿಳಿಸಿದ. ಇದು ನನಗೆ ಮತ್ತು ನನ್ನ ಕುಟುಂಬಸ್ಥರಿಗೆ ಇಷ್ಟವಾಗಲಿಲ್ಲ.
ರಾಘವೇಂದ್ರ ನನ್ನ ಮದುವೆ ಆಗುವ ಮೊದಲೇ ರುಕ್ಮೀಣಿಯನ್ನು ವಿವಾಹ ಆಗಿರುವ ವಿಚಾರ ಮುಚ್ಚಿಟ್ಟು ನನಗೆ ಮೋಸ ಮಾಡಿದ್ದಾರೆ. ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಪದೇಪದೆ ತವರು ಮನೆಯಿಂದ ಹಣ ತರುವಂತೆ ಒತ್ತಾಯ ಮಾಡುತ್ತಿದ್ದಾರೆ. ರುಕ್ಮೀಣಿಯ ಸಹೋದರ ಹನುಮಂತ ತಿಮ್ಮಾಪುರ ನನಗೆ ಕರೆ ಮಾಡಿ ಪ್ರಾಣ ಬೆದರಿಕೆ ಒಡ್ಡಿದ್ದಾರೆ. ರಾಘವೇಂದ್ರ ಮತ್ತು ಹನುಮಂತನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ರೋಜಾ ಮನವಿ ಮಾಡಿದ್ದಾರೆ. ಇದರ ಅನ್ವಯ ಪ್ರಕರಣ ದಾಖಲಿಸಿಕೊಂಡು ಸಂಬಂಧಪಟ್ಟ ಠಾಣೆಗೆ ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.