ಚೇತನಾ ರಾಜ್​ ಸಾವು ಪ್ರಕರಣ: ತಲೆಯಲ್ಲಿ ಕೂದಲು ಇಲ್ಲದಿದ್ರೂ... ಸ್ಯಾಂಡಲ್​ವುಡ್​ ವಿರುದ್ಧ ಸಮರ ಸಾರಿದ ನಟಿ ರಮ್ಯಾ!

ramya
Published on

ಬೆಂಗಳೂರು: ದೇಹದಲ್ಲಿನ ಫ್ಯಾಟ್​ ಬರ್ನ್​ ಮಾಡಿಸಿಕೊಳ್ಳಲೆಂದು ಆಸ್ಪತ್ರೆಗೆ ಹೋದ ಕನ್ನಡದ ಕಿರುತೆರೆಯ ಯುವ ನಟಿ ಚೇತನಾ ರಾಜ್ ಆಪರೇಷನ್​ ವೇಳೆಯೇ ದುರಂತ ಅಂತ್ಯಕಂಡದ್ದು, ಅಂತ್ಯಂತ ವಿಷಾದನೀಯ. ಚೇತನಾ ನಿಧನಕ್ಕೆ ಸಂತಾಪ ಸೂಚಿಸಿರುವ ಸ್ಯಾಂಡಲ್​ವುಡ್​ನ ನಟಿ ರಮ್ಯಾ, ಸಿನಿಮಾರಂಗದಲ್ಲಿನ ಲಿಂಗ ತಾರತಮ್ಯದ ಬಗ್ಗೆ ಕಿಡಿಕಾರಿದ್ದಾರೆ.

'ಪುರುಷರಿಗೆ 65 ವರ್ಷವಾದ್ರೂ ಆತ ಹೀರೋ ಆಗಬಹುದು. ಡೊಳ್ಳುಹೊಟ್ಟೆ, ತಲೆಯಲ್ಲಿ ಕೂದಲು ಇಲ್ಲದಿದ್ದರೂ ಆತನಿಗೆ ಹೀರೋ ಪಟ್ಟ ಒಲಿಯುತ್ತೆ. ಆದರೆ ಮಹಿಳೆಯರ ಸ್ಥಿತಿ ಮಾತ್ರ ಕೆಟ್ಟದ್ದಾಗಿದೆ. ಆಕೆ ಸ್ವಲ್ಪ ದಪ್ಪ ಆದರೂ ಆಂಟಿ, ಬುಡ್ಡಿ, ಅಜ್ಜಿ ಅಂತೆಲ್ಲಾ ಮೂದಲಿಸುತ್ತಾ ಟ್ರೋಲ್​ ಮಾಡುತ್ತಾರೆ. ಚಿತ್ರೋದ್ಯಮವು ಸ್ತ್ರೀಯರ ಸೌಂದರ್ಯಕ್ಕೆ ಸಂಬಂಧಿಸಿ ಅತ್ಯಂತ ಅವಾಸ್ತವಿಕ ಮಾನದಂಡ ನಿಗದಿಪಡಿಸುತ್ತಿದೆ. ನಿರ್ದಿಷ್ಟ ರೀತಿಯಲ್ಲೇ ಕಾಣಬೇಕು ಎಂಬ ಒತ್ತಡ ಹೆಚ್ಚಾಗ್ತಿದೆ. ಯುವ ನಟಿಯೊಬ್ಬಳು ಫ್ಯಾಟ್​ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಮೃತಪಟ್ಟದ್ದು ಅತ್ಯಂತ ನೋವಿನ ಸುದ್ದಿ' ಎಂದು ಬೇಸರ ಹೊರ ಹಾಕಿದ್ದಾರೆ.

'ಸರ್ಜರಿಯಿಂದ ಯುವ ನಟಿಯ ಪ್ತಾಣ ಹೋಗಿದೆ. 2018ರಲ್ಲಿ ನನ್ನ ಕಾಲಿನ‌ ಟ್ಯೂಮರ್ ತೆಗೆಸಿದ ಬಳಿಕ ನಾನೂ ದಪ್ಪಗಾದೆ. ನಾನೀಗ ನಿಧಾನವಾಗಿ ವೇಟ್ ಲಾಸ್ ಮಾಡುತ್ತಿದ್ದೇನೆ. ಆದರೆ. ಸರ್ಜರಿ ಮಾಡಿಸಿಕೊಂಡ ಬಳಿ ಮೃತಪಟ್ಟ ನಟಿಯ ಬಗ್ಗೆ ನನಗೆ ಸಹಾನುಭೂತಿಯಿದೆ. ಮಹಿಳೆಯರು ನಾವು ನಾವಾಗೇ ಇರಬೇಕು. ಚಿತ್ರೋದ್ಯಮ ಲಿಂಗತಾರತಮ್ಯ ಬಿಡಬೇಕು. ಮಹಿಳೆಯರಿಗೆ ಸೂಕ್ತ ಪಾತ್ರ ಕೊಡಬೇಕು. ವೇತನ, ಸೌಂದರ್ಯ, ಪಾತ್ರ, ಲಿಂಗ ತಾರತಮ್ಯದ ವಿರುದ್ಧ ಪುರುಷರು-ಮಹಿಳೆಯರು ಒಟ್ಟಾಗು ಹೋರಾಡಬೇಕು ಎಂದು ರಮ್ಯಾ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net