

ಆಲೂರು: ಬೆಳಕಿನ ಹಬ್ಬ ದೀಪಾವಳಿಯನ್ನು ಆಲೂರು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ-ಶನಿವಾರ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಎರಡು ಒಂದೇ ದಿನಕ್ಕೆ ಬಂದಿದ್ದರಿಂದ ಸಂಭ್ರಮ ಇಮ್ಮಡಿಗೊಳಿಸಿತ್ತು. ಹಬ್ಬದ ಪ್ರಯುಕ್ತ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ-ಪುನಸ್ಕಾರ ನಡೆದರೆ, ಆಲೂರು ಪಟ್ಟಣದ ಹಲವು ಸಂಘ ಸಂಸ್ಥೆಗಳು ಕಚೇರಿಗಳಲ್ಲಿ ಹಾಗೂ ಆಟೋ ನಿಲ್ದಾಣದಲ್ಲಿ ತಾಯಿ ಭುವನೇಶ್ವರಿ ದೇವಿಯ ಫೋಟೋವನ್ನು ಅಲಂಕರಿಸಿ ಪೂಜಿಸುವ ಮೂಲ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಆಲೂರು ಪಟ್ಟಣದ ಮನೆ-ಮನೆಗಳಲ್ಲಿ ಸಂಭ್ರಮ, ಸಂತಸ ಮನೆ ಮಾಡಿತ್ತು. ಪ್ರತಿ ಮನೆ ಎದುರಿಗೆ ವಾಹನ ತೊಳೆದು ಅಮಾವಾಸ್ಯೆ ಪೂಜೆಯನ್ನು ವಿಶೇಷವಾಗಿ ಮಾಡಲಾಗಿತ್ತು. ಬಟ್ಟೆ, ಪೂಜಾ ವಸ್ತುಗಳ ಹಾಗೂ ಇನ್ನಿತರ ಮಳಿಗೆಗಳಲ್ಲಿ ಹಬ್ಬದ ಪೂಜೆ ಶುಕ್ರವಾರವೇ ನಡೆಯಿತು. ನರಕ ಚತುದರ್ಶಿ, ಸಂಜೆ ಅಂಗಡಿ, ಮುಂಗಟ್ಟು ಹಾಗೂ ಮನೆ-ಮನಗಳಲ್ಲಿ ಲಕ್ಷ್ಮೀ ಪೂಜೆ ನೆರವೇರಿಸಲಾಯಿತು.
ಪಟ್ಟಣದಲ್ಲಿ ಕಬ್ಬು, ಬಾಳೆ ದಿಂಡು, ಚಂಡು ಹೂ, ಬೂದು ಕುಂಬಳಕಾಯಿ ಖರೀದಿ ನಡೆಯಿತು. ಗೃಹ ಉಪಯೋಗಿ ವಸ್ತುಗಳ ವ್ಯಾಪಾರದ ಭರಾಟೆ ನಡೆಯಿತು.
ಗ್ರಾಮೀಣ ಪ್ರದೇಶಗಳಲ್ಲಿ ಬಲಿಪಾಡ್ಯಮಿ ದಿನವಾದ ಶನಿವಾರ ಬೆಳಗ್ಗೆ ರೈತರು ಜಮೀನಿಗೆ ಆವಿಗೆ ಬೂದಿಯನ್ನು ಹಾಕಿದರು. ಸ್ಥಳೀಯ ಪರಿಸರದಲ್ಲಿ ಸಿಗುವ ಎಲ್ಲ ತರಹದ ಗಿಡ, ಮರಗಳ ರೆಂಬೆ, ಚೇಜಿಗೆಯನ್ನು ಕಂತೆ ಕಟ್ಟಿಕೊಂಡು ಬಂದು ಊರ ಬಾಗಿಲಲ್ಲಿ ಒಟ್ಟಾಗಿ ಸೇರಿ ಸಾಂಪ್ರದಾಯಿಕವಾಗಿ ಪೂಜಿಸಿದರು.
ಮಹಿಳೆಯರು ಊರಿನ ಕೆರೆಯಿಂದ ವಾದ್ಯಗೋಷ್ಠಿಯೊಂದಿಗೆ ಕಳಸದಲ್ಲಿ ನೀರು ಹೊತ್ತು ತಂದು ಊರ ಬಾಗಿಲು ದೇವಿಗೆ ಪೂಜೆ ಸಲ್ಲಿಸಿದರು. ಹಬ್ಬದ ಹಿಂದಿನ ದಿನ ಸಂಗ್ರಹಿಸಿದ್ದ ಸೋರೆಕಾಯಿಯನ್ನು ಬಂದೂಕಿನಿಂದ ಗುಂಡು ಹಾರಿಸಿ ಸೋರೆಕಾಯಿಯನ್ನು ಪುಡಿ ಮಾಡಿದರು. ಮನೆಗಳಲ್ಲಿ ಗೋವಿನ ಸಗಣಿಯಲ್ಲಿ ತಿಪ್ಪಮ್ಮ ದೇವರ ಸ್ವರೂಪವನ್ನು ಮಾಡಿ ಚೆಂಡು ಹೂಗಳಿಂದ ಅಲಂಕರಿಸಿ ನೈವೇದ್ಯ ಮಾಡಿ ಪೂಜೆ ಸಲ್ಲಿಸಿದರು. ಸಂಜೆ ಪ್ರತಿಯೊಬ್ಬರೂ ತಮ್ಮ ಮನೆಗಳ ಮುಂಭಾಗದಲ್ಲಿ ದೀಪಗಳನ್ನು ಹೊತ್ತಿಸಿ ಪೂಜಿಸಿ ದೀಪಾವಳಿ ಹಬ್ಬಕ್ಕೆ ನಾಂದಿ ಹಾಡಿದರು.
ಸಂಪ್ರದಾಯದಂತೆ ಕೆಲವು ಮನೆಗಳಲ್ಲಿ ಹಿರಿಯರನ್ನು ನೆನಪಿಸುವ ಪಿತೃಪಕ್ಷ ಹಬ್ಬವನ್ನು ಇಷ್ಟಮಿತ್ರ ಬಂಧುಗಳೊಂದಿಗೆ ಆಚರಿಸಿ ಸಂಭ್ರಮಿಸಿದರು.