

ತುಮಕೂರು: ಕಿಡ್ನಿ ವೈಫಲ್ಯದಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಗನಿಗೆ ತಂದೆಯೇ ಕಿಡ್ನಿ ದಾನ ಮಾಡಿದ್ದು, ಸಿದ್ಧಗಂಗಾ ಆಸ್ಪತ್ರೆಯಲ್ಲಿ ಯಶಸ್ವಿ ಕಿಡ್ನಿ ಕಸಿ ನಡೆಸಲಾಗಿದೆ. ಸಿದ್ಧಗಂಗಾ ಆಸ್ಪತ್ರೆಯಲ್ಲಿ ನಡೆದ ಎರಡನೇ ಬಾರಿಗೆ ಯಶಸ್ವಿ ಕಿಡ್ನಿ ಕಸಿ ಇದಾಗಿದೆ.
ತಂದೆಯೇ ಮಗನಿಗೆ ಕಿಡ್ನಿ ದಾನ ಮಾಡುವ ಮೂಲಕ ಜೀವದಾನ ಮಾಡಿದ್ದು, ಇತ್ತೀಚೆಗೆ ನಾವು ಆಚರಿಸಿದ ವಿಶ್ವ ಅಪ್ಪಂದಿರ ದಿನಕ್ಕೆ ಇದು ಅರ್ಥಪೂರ್ಣ ಉದಾಹರಣೆಯಾಗಿದೆ ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್. ಪರಮೇಶ್ ಹೇಳಿದರು.
21 ವರ್ಷದ ಯುವಕ ಲೋಕೇಶ್ಗೆ ಕಿಡ್ನಿ ಕಸಿ ಮಾಡಲು ಮುಂದಾದಾಗ ಸಿದ್ಧಗಂಗಾ ಮಠಾಧ್ಯ ಸಿದ್ಧಲಿಂಗ ಶ್ರೀಗಳು ಬಡ ಯುವಕನ ಕುಟುಂಬಕ್ಕೆ ಆರ್ಥಿಕ ಹೊರೆಯಾಗದಂತೆ ಶಸ್ತ್ರಚಿಕಿತ್ಸೆ ನಡೆಸಿ ಎಂದು ನಿರ್ದೇಶನ ನೀಡಿದ್ದರು. ಅವರ ಮಾತಿನಂತೆ ದಾನಿಗಳ ನೆರವು ಪಡೆದುಕೊಂಡು, ವೈದ್ಯಕೀಯ ವೆಚ್ಚ ಸರಿದೂಗಿಸಲು ಅಂತಿಮವಾಗಿ ನಮ್ಮ ವೈದ್ಯರೇ ನೆರವು ನೀಡಿ ಈ ಕಸಿಯನ್ನು ಯಶಸ್ವಿಯಾಗಿಸಿದ್ದಾರೆ ಎಂದು ಡಾ.ಎಸ್. ಪರಮೇಶ್ ತಿಳಿಸಿದರು.
ಮೂತ್ರಪಿಂಡ ತಜ್ಞ ಡಾ.ರಂಗೇಗೌಡ, ವೈದ್ಯಕೀಯ ಅಧೀಕ್ಷಕ ಡಾ.ನಿರಂಜನ್ ಮೂರ್ತಿ, ಡಾ.ನರಸಿಂಹಮೂರ್ತಿ, ಡಾ.ಅಭಿಲಾಷ್, ಡಾ.ಕೆ.ಆರ್.ಮಧು, ಡಾ.ಶಶಿಕಿರಣ್, ಸಿಇಒ ಡಾ.ಸಂಜೀವ್ಕುಮಾರ್, ಪಿಆರ್ಒ ಕಾಂತರಾಜು, ಟ್ರಾನ್ಸ್ಪ್ಲಾಂಟ್ ಕೋ-ಆರ್ಡಿನೇಟರ್ ಡಿ.ಕೆ.ಕಾರ್ತಿಕ್ ಇದ್ದರು.