ಆರತಕ್ಷತೆಗೂ 2 ದಿನ ಮೊದಲೇ ನವ ವಿವಾಹಿತೆ ಕಿಡ್ನ್ಯಾಪ್​! ಹುಬ್ಬಳ್ಳಿ ಕಾರ್ಪೋರೇಟರ್ ಸೇರಿ ಮೂವರ ವಿರುದ್ಧ ಕೇಸ್​​

New Project(2)
Published on

ಹುಬ್ಬಳ್ಳಿ: ಅವರಿಬ್ಬರೂ ಪರಸ್ಪರ ಪ್ರೀತಿಸಿ ಮದ್ವೆಯಾಗಿತ್ತು. ಮನೆಯವರ ವಿರೋಧದ ನಡುವೆಯೂ ಯುವತಿ ಪ್ರಿಯಕರನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ಅತ್ತ ಮಗ-ಸೊಸೆಯನ್ನು ಮನೆ ತುಂಬಿಸಿಕೊಂಡ ಯುವಕನ ಪಾಲಕರು ನಾಳೆ(ಜೂ.26) ಅದ್ದೂರಿಯಾಗಿ ಆರತಕ್ಷತೆ ನೆರವೇರಿಸಲು ಸಿದ್ಧತೆ ಮಾಡಿಕೊಂಡಿತ್ತು. ಅಷ್ಟರಲ್ಲಿ ಯುವತಿಯನ್ನೇ ಕಿಡ್ನ್ಯಾಪ್​ ಮಾಡಲಾಗಿದೆ! ಗಂಡನೊಂದಿಗೆ ತನ್ನ ಅಪ್ಪ-ಅಮ್ಮನ ಆಶೀರ್ವಾದ ಪಡೆಯಲೆಂದು ಹೋದ ಯುವತಿಯನ್ನ ಹುಬ್ಬಳ್ಳಿಯ ಕಾರ್ಪೋರೇಟರ್ ಸೇರಿ ಮೂವರು ಅಪಹರಿಸಿದ್ದಾರೆ ಎಂದ ಯುವಕ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾನೆ.

ಶುಕ್ರವಾರ ರಾತ್ರಿ ಯುವಕ ಕೊಟ್ಟ ದೂರಿನ ಮೇರೆಗೆ ಕಾರ್ಪೋರೆಟರ್ ಚೇತನ ಹಿರೇಕೆರೂರ, ಯುವತಿಯ ತಂದೆ ಶಿವು ಹಿರೇಕೆರೂರ ಸೇರಿ ಮೂವರ ವಿರುದ್ಧ ಹುಬ್ಬಳ್ಳಿಯ ಗೋಕುಲ ರೋಡ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವು ಹಿರೇಕೆರೂರ ಅವರ ಪುತ್ರಿ ಸಹನಾ ಮತ್ತು ನಿಖಿಲ್ ದಾಂಡೇಲಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಗೆ ಸಹನಾಳ ಕುಟುಂಬಸ್ಥರಿಂದ ವಿರೋಧ ಇತ್ತಂತೆ. ಹಾಗಾಗಿ ಮನೆಯವರ ವಿರೋಧದ ನಡುವೆಯೂ ಸಹನಾ ನಾಲ್ಕೈದು ತಿಂಗಳ ಹಿಂದೆಯೇ ಪ್ರಿಯಕರ ನಿಖಿಲ್​ ಜತೆ ಮದ್ವೆಯಾಗಿದ್ದಳು.

ಇವರಿಬ್ಬರ ಮದ್ವೆಯನ್ನು ಒಪ್ಪಿಕೊಂಡ ಯುವಕನ ಕುಟುಂಬಸ್ಥರು ನವದಂಪತಿಗಾಗಿ ಭಾನುವಾರ ಆರತಕ್ಷತೆ ಕಾರ್ಯಕ್ರಮ ನಡೆಸಲು ಸಿದ್ಧತೆಯಲ್ಲಿದ್ದರು. ಅತ್ತ ಪೋಷಕರನ್ನು ಭೇಟಿಯಾಗಿ ಆರ್ಶೀವಾದ ಪಡೆಯಲು ಹುಬ್ಬಳ್ಳಿಯ ಅಕ್ಷಯ್ ಪಾರ್ಕ್ ಬಳಿಗೆ ಸಹನಾ ಹೋಗಿದ್ದಳು. ಈ ವೇಳೆ ಯುವತಿಯನ್ನು ಸೋದರ ಸಂಬಂಧಿಯಾದ ಕಾರ್ಪೋರೆಟರ್ ಚೇತನ ಹಿರೇಕೆರೂರ, ಆಕೆಯ ತಂದೆ ಕಿಡ್ನ್ಯಾಪ್​ ಮಾಡಿದ್ದಾರೆ ಎಂದು ಸಹನಳಾ ಗಂಡ ದೂರು ನೀಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net