ಜಿಲ್ಲಾಧಿಕಾರಿಯ ಆಡಳಿತ ವೀಕ್ಷಿಸಲಿರುವ ರೈತನ ಮಗಳು! ಕೌಶಲ ಸ್ಫೂರ್ತಿ ಸ್ಪರ್ಧೆಯಲ್ಲಿ ಮಂಡ್ಯದ ಪ್ರಿಯಾ ಆಯ್ಕೆ

New Project(17)
Published on

| ವಿಜಯವಾಣಿ ವಿಶೇಷ ಮಂಡ್ಯ

ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗಲೇ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಆಡಳಿತ ವೈಖರಿಯನ್ನು ಅವರೊಟ್ಟಿಗೇ ಇದ್ದು ನೋಡುವ ಅವಕಾಶ ಸಿಕ್ಕರೆ? ಇಂತಹದ್ದೊಂದು ವಿಶೇಷ ಅವಕಾಶ ರೈತನ ಮಗಳಿಗೆ ಒಲಿದಿದೆ. ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾಗಿರುವ ಟಿ.ಪ್ರಿಯಾ ಅವರಿಗೆ ಇಂತಹ ವಿಶೇಷ ಅವಕಾಶ ಸಿಕ್ಕಿದೆ.

ವಿಶ್ವ ಯುವ ಕೌಶಲ ದಿನದ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲೆಯಿಂದ ಮೊದಲ ಸ್ಥಾನ ಪಡೆದಿರುವ ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೊದಲ ವರ್ಷದಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿರುವ ಪ್ರಿಯಾ, ಶೀಘ್ರವೇ ಒಂದು ದಿನ ಜಿಲ್ಲಾಧಿಕಾರಿ ಎಸ್.ಅಶ್ವಥಿ ಅವರ ಕಾರ್ಯ ವೈಖರಿಯನ್ನು ನೋಡಲಿದ್ದಾರೆ.

ಏನಿದು ಕೌಶಲ ಸ್ಫೂರ್ತಿ?: ಈ ವರ್ಷದ ವಿಶ್ವ ಕೌಶಲ ದಿನಾಚರಣೆ ವಿಶೇಷವಾಗಿರಲೆಂದು ಇಲಾಖೆ ಹಾಗೂ ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದಿಂದ ಕೌಶಲ ಸ್ಫೂರ್ತಿ ಶೀರ್ಷಿಕೆಯಡಿ ಕಾಲೇಜು ವಿದ್ಯಾರ್ಥಿಗಳಿಗೆ ಆಗಸ್ಟ್‌ನಲ್ಲಿ ಆನ್‌ಲೈನ್‌ನಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಅದರಂತೆ ‘ಶಕ್ತಿಯುತ ಸುಸ್ಥಿರ ಬೆಳವಣಿಗಾಗಿ ಕೌಶಲಯುತ ಮಾನವ ಸಂಪನ್ಮೂಲ ಸೃಷ್ಟಿಸುವ ಮಾರ್ಗಗಳು’ ವಿಷಯದಲ್ಲಿ ಪ್ರಬಂಧ ಬರೆಯಬೇಕಿತ್ತು. ರಾಜ್ಯಮಟ್ಟದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಂತೆಯೇ ಜಿಲ್ಲೆಯಿಂದ 15 ವಿದ್ಯಾರ್ಥಿಗಳು ಪಾಲ್ಗೊಂಡು ಈ ಪೈಕಿ 8 ವಿದ್ಯಾರ್ಥಿಗಳು ಪ್ರಶಸ್ತಿಗೆ ಅರ್ಹತೆ ಪಡೆದುಕೊಂಡಿದ್ದರು. ಅಂತಿಮವಾಗಿ ಟಿ.ಪ್ರಿಯಾ ಜಿಲ್ಲೆಗೆ ಟಾಪರ್ ಆಗಿದ್ದಾರೆ.

ಜಿಲ್ಲಾಮಟ್ಟದಲ್ಲಿ ಮೊದಲ ಸ್ಥಾನ ಪಡೆದವರಿಗೆ ಜಿಲ್ಲಾಧಿಕಾರಿ ಅವರ ಕಾರ್ಯ ವೈಖರಿ ನೋಡಲು ಅವಕಾಶ ನೀಡಲಾಗಿದೆ. ಅದರಂತೆ ಪ್ರಿಯಾಗೂ ಅವಕಾಶ ಸಿಕ್ಕಿದ್ದು, ಜಿಲ್ಲಾಧಿಕಾರಿ ದಿನಾಂಕ ನೀಡಿದ ಕೂಡಲೇ ಅವರೊಟ್ಟಿಗಿದ್ದು ಅಧಿಕಾರ ನಡೆಸುವುದನ್ನು ನೋಡಲಿದ್ದಾರೆ. ಟಿ.ಪ್ರಿಯಾ ಮಂಡ್ಯ ತಾಲೂಕು ತಂಗಳಗೆರೆ ಗ್ರಾಮದ ರೈತ ಟಿ.ಸಿ.ತಮ್ಮಯ್ಯ ಹಾಗೂ ರೇಣುಕಾ ದಂಪತಿಯ ಮಗಳು. ಕೆ.ಆರ್.ಪೇಟೆಯಲ್ಲಿ ದೊಡ್ಡಮ್ಮನ ಮನೆಯಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದಾರೆ.

ನಾನು ಮೊದಲ ಸ್ಥಾನ ಪಡೆಯುತ್ತೇನೆಂದು ನಿರೀಕ್ಷೆ ಇರಲಿಲ್ಲ. ಫಲಿತಾಂಶ ಬಂದ ನಂತರ ಖುಷಿಯಾಗಿದೆ. ನನಗೆ ಪ್ರಾಧ್ಯಾಪಕ ಕಿರಣ್ ಸರ್ ಅವರು ಮಾರ್ಗದರ್ಶನ ನೀಡಿದರು. ಜಿಲ್ಲಾಧಿಕಾರಿ ಅವರ ಕಾರ್ಯವೈಖರಿ ನೋಡಲು ಕುತೂಹಲದಲ್ಲಿದ್ದೇನೆ.

| ಟಿ.ಪ್ರಿಯಾ ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿನಿ

ಕೌಶಲ ಸ್ಫೂರ್ತಿ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಟಿ.ಪ್ರಿಯಾ ಆಯ್ಕೆಯಾಗಿದ್ದಾರೆ. ಜಿಲ್ಲಾಧಿಕಾರಿ ಅವರ ದಿನಾಂಕ ನಿಗದಿ ನೋಡಿಕೊಂಡು ಕಾರ್ಯಕ್ರಮ ರೂಪಿಸಲಾಗುವುದು.

| ಎನ್.ಆರ್.ವೇಣುಗೋಪಾಲ್ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net