

ಅಂತೋಣಿ ಪಿ.ವಿ.ಸಿದ್ದಾಪುರ
ಬಂಗಾಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕೊಡಗು ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಿಲ್ಲೆಯಲ್ಲಿ ಅಡಕೆ, ಕಾಫಿ, ಭತ್ತ ಕೊಯ್ಲು ನಡೆಯುತ್ತಿದ್ದು ವರ್ಷದ ಕೂಳು ಕೈ ಚೆಲ್ಲುವ ಆತಂಕ ಸೃಷ್ಟಿಯಾಗಿದೆ.
ಒಂದು ವಾರದಿಂದ ಇರುವ ಮೋಡ ಕವಿದ ವಾತಾವರಣ ಹಾಗೂ ಸೋಮವಾರದಿಂದ ಸುರಿಯುತ್ತಿರುವ ಮಳೆಯಿಂದ ರೈತ ಅತಂತ್ರಕ್ಕೆ ಸಿಲುಕಿದ್ದಾನೆ.
ಮಳೆ ಹಾಗೂ ಮೋಡದಿಂದ ಕೊಯ್ಲು ಮಾಡಿದ ಕಾಫಿ ಒಣಗಿಸಲು ಸಾಧ್ಯವಾಗದೆ ಪರದಾಡುವಂತಾಗಿದೆ. ಇನ್ನೊಂದೆಡೆ ಹಣ್ಣು ಉದುರುತ್ತಿದ್ದು, ಬೆಳೆಗಾರನ ಕೈ ಸೇರುವುದು ಕಷ್ಟಸಾಧ್ಯವಾಗಿದೆ. ಭತ್ತ ಕೂಡ ಕೊಯ್ಲಿಗೆ ಬಂದಿದ್ದು, ಮಳೆಯಾಗುತ್ತಿರುವುದರಿಂದ ನೆಲಕಚ್ಚುತ್ತಿದೆ. ಕೆಲವು ನೆಲೆಯಲ್ಲೇ ಮೊಳಕೆಯೊಡುವ ಸಾಧ್ಯತೆ ಇದೆ. ಮಳೆ ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವ ಸ್ಥಿತಿ ಬಂದೊದಗಿದೆ. ವರ್ಷವಿಡೀ ಕೂಲಿ ನೀಡಿ ಕೆಲಸ ನಿರ್ವಹಿಸಿ ಫಸಲು ಬರುವ ಸಮಯದಲ್ಲಿ ಮಳೆಯಾದರೆ ಬೆಳೆಗಾರ ನಷ್ಟಹೊಂದುವ ಸಾಧ್ಯತೆ ಇದೆ.
ಉದುರುತ್ತಿರುವ ಹಣ್ಣು: ಹಣ್ಣಾಗಿರುವ ಕಾಫಿಗೆ ನೀರು ಸೇರಿ ನೆಲ್ಲಕ್ಕೆ ಉದುರುತ್ತಿದೆ. ಅಲ್ಲದೆ ಕೆಲವು ಹಣ್ಣು ಒಡೆದು ನೀರು ಸೇರಿ ಹಾಳಾಗುತ್ತಿದೆ. ಮಳೆಯಾದ್ದರಿಂದ ತುರ್ತಾಗಿ ಕಾಫಿಕೊಯ್ಲು ನಡೆಸಬೇಕಿರುವುದರಿಂದ ಕಾರ್ಮಿಕರ ಸಮಸ್ಯೆಕೂಡ ಏರ್ಪಡುತ್ತಿದೆ. ದೂರದ ಊರುಗಳಿಂದ ಹೆಚ್ಚಿನ ಸಂಬಳಕ್ಕೆ ಕಾರ್ಮಿಕರನ್ನು ಕರೆ ತರಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ ಒಟ್ಟಿನಲ್ಲಿ ಬೆಳೆಗಾರ ಎಲ್ಲ ರೀತಿಯಿಂದಲೂ ಸಂಕಷ್ಟಕ್ಕೆ ಸಿಲುಕುವಂತಾಗಿದ್ದಾನೆ.
ನೆಲಕಚ್ಚುತ್ತಿರುವ ಭತ್ತ: ಭತ್ತ ಬೆಳೆ ಕೂಡ ಕೊಯ್ಲಿಗೆ ಬಂದಿದ್ದು, ಇದು ಕೂಡ ನೆಲ ಕಚ್ಚುವ ಆತಂಕ ಏರ್ಪಟ್ಟಿದೆ. ಅಕಾಲಿಕ ಮಳೆಯಿಂದ ಪೈರು ನೆಲಕ್ಕೆ ಬೀಳುತ್ತಿದೆ. ಅಲ್ಲದೆ ನೀರು ಸೇರಿ ನಷ್ಟ ಏರ್ಪಡುತ್ತಿದೆ. ಭತ್ತಕ್ಕೆ ನೀರು ಸೇರಿ ಪೈರಿನಲ್ಲೇ ಮೊಳಕೆ ಒಡೆದು ನಷ್ಟ ಏರ್ಪಡುವ ಸಾಧ್ಯತೆ ಇದೆ. ಗದ್ದೆಯಲ್ಲಿ ನೀರು ನಿಲ್ಲುವುದರಿಂದ ಕೊಯ್ಲು ಕೂಡ ಸಾಧ್ಯವಾಗದ ಪರಿಸ್ಥಿತಿ ಇದೆ. ಕಾಡು ಪ್ರಾಣಿಗಳ ಉಪಟಳದಿಂದ ಅಳಿದುಳಿದ ಫಸಲು ಈಗ ಮಳೆಯಿಂದ ನಷ್ಟಹೊಂದುತ್ತಿರುವುದರಿಂದ ರೈತ ಇನ್ನಷ್ಟು ಅತಂತ್ರನಾಗುತ್ತಿದ್ದಾನೆ.
ರೋಗಬಾಧೆಗೆ ತುತ್ತಾಗುವ ಸಾಧ್ಯತೆ: ಹಣ್ಣಾಗಿರುವ ಕಾಫಿ ಕಟಾವು ಬೇಗನೆ ಮುಗಿಸುವಂತೆ ಕಾಫಿ ಮಂಡಳಿ ಸಲಹೆ ನೀಡಿದೆ. ಮುಂದಿನ ದಿನಗಳಲ್ಲಿ ಮಳೆಯಾದರೆ ಕಾಫಿ ಉದುರುವ ಸಾಧ್ಯತೆ ಹೆಚ್ಚಿದೆ. ಬೆಳೆಗಾರನಿಗೆ ಕಾಫಿ ಹೆಕ್ಕಿಸುವ ಹೊರೆಯೂ ಬೀಳಲಿದೆ. ಬೆಳೆಗಾರರು ಮಳೆಯಿಂದ ಉದುರಿದ ಹಣ್ಣನ್ನು ಅಲ್ಲಿಯೇ ಬಿಟ್ಟರೆ ಮುಂದೆ ಕಾಫಿ ಕಾಯಿ ಕೊರಕೆ (ಬೆರಿ ಬೋರರ್) ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ಕಾಫಿ ಮಂಡಳಿ ಎಚ್ಚರಿಕೆ ನೀಡಿದೆ.