

ಪುತ್ತೂರು: ರಾತ್ರಿ ಊಟ ಮಾಡಿ ಮಲಗಲು ಕೋಣೆಗೆ ಹೋದ ರೈತ ದಂಪತಿ ಬೆಳಗಾಗುವಷ್ಟರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪಾದೆಕರ್ಯ ನಿವಾಸಿ, ಕೃಷಿಕ ಸುಬ್ರಹ್ಮಣ್ಯ ಭಟ್(84) ಮತ್ತು ಪತ್ನಿ ಶಾರದಾ(78) ಮೃತರು. ಭಾನುವಾರ ರಾತ್ರಿ ಊಟ ಮಾಡಿ ಮನೆಯ ಕೆಳ ಅಂತಸ್ತಿನ ಕೋಣೆಯಲ್ಲಿ ದಂಪತಿ ಮಲಗಿದ್ದರು. ಪುತ್ರ, ಸೊಸೆ, ಮೊಮ್ಮಕ್ಕಳು ಮೇಲಿನ ಮಹಡಿಯಲ್ಲಿ ಮಲಗಿದ್ದರು.
ಸೋಮವಾರ ಬೆಳಗ್ಗೆ ಅಪ್ಪ-ಅಮ್ಮನ ಕೋಣೆಯ ಬಾಗಿಲನ್ನ ಪುತ್ರ ತೆರೆದಾಗ ಘಟನೆ ಬೆಳಕಿಗೆ ಬಂದಿದೆ. ಆದರೆ, ವೃದ್ಧ ದಂಪತಿ ಇಬ್ಬರೂ ಹೊಸ ಬಟ್ಟೆ ಧರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾನುವಾರ ರಾತ್ರಿ ಏನಾಯ್ತು? ಅವರಿಬ್ಬರೂ ಸಾಯುವ ನಿರ್ಧಾರಕ್ಕೆ ಬರಲು ಕಾರಣ ಏನು? ಎಂಬುದು ಮಾತ್ರ ನಿಗೂಢವಾಗಿದ್ದು, ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.