

ನಾಗಮಂಗಲ: ಸಾಲಬಾಧೆಯಿಂದ ಬೇಸತ್ತು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟಿದ್ದಾರೆ.
ತಾಲೂಕಿನ ಲಾಳನಕೆರೆ ಗ್ರಾಮದ ಕಾಂತೇಗೌಡರ ಮಗ ಜಯರಾಮೇಗೌಡ(65) ಮೃತರು. ಲಾಳನಕೆರೆ ಗ್ರಾಮದಲ್ಲಿ 2.20 ಗುಂಟೆ ಜಮೀನು ಹೊಂದಿದ್ದ ಜಯರಾಮೇಗೌಡ ಕೃಷಿ ಚಟುವಟಿಕೆ ಉದ್ದೇಶಕ್ಕಾಗಿ ಟ್ರಾೃಕ್ಟರ್ ಸಾಲ, ಸ್ಥಳೀಯ ಸಹಕಾರ ಸಂಘ ಮತ್ತು ಖಾಸಗಿ ವ್ಯಕ್ತಿಗಳಿಂದ ಕೈ ಸಾಲ ಸೇರಿ 8ಲಕ್ಷ ರೂ.ಗೂ ಹೆಚ್ಚು ಸಾಲ ಮಾಡಿದ್ದರು ಎಂದು ತಿಳಿದುಬಂದಿದೆ.
ಆ.29ರಂದು ಮದ್ಯದೊಂದಿಗೆ ಕ್ರಿಮಿನಾಶಕ ಬೆರೆಸಿ ಸೇವನೆ ಮಾಡಿ ತುರುವೇಕೆರೆ ತಾಲೂಕಿನ ಬಿ.ಪುರ ಗ್ರಾಮದ ತನ್ನ ಚಿಕ್ಕಮ್ಮನ ಮನೆಗೆ ತೆರಳಿದ್ದರು. ಈ ವೇಳೆ ಹೊಟ್ಟೆ ಉರಿ ಎಂದ ಅವರನ್ನು ದಬ್ಬೇಘಟ್ಟದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಬಳಿಕ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಸ್ವಗ್ರಾಮ ಲಾಳನಕೆರೆಗೆ ಕರೆತರಲಾಗಿತ್ತು. ಸೋಮವಾರ ಹೊಟ್ಟೆ ಉರಿ ಹೆಚ್ಚಾಗಿ ನರಳುತ್ತಿದ್ದ ಅವರನ್ನು ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.