

ಕುಣಿಗಲ್: ತಾಲೂಕು ಒಕ್ಕಲಿಗ ಸಂಘದಲ್ಲಿ ಫ್ಯಾನ್ ಕದ್ದು ಸಂಘದ ಕಾರ್ಯದರ್ಶಿ ಮಾರಾಟ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಸಂಘದ ಸದಸ್ಯರು ಮಂಗಳವಾರ ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ.
ಕುಣಿಗಲ್ ಕಚೇರಿಯಲ್ಲಿನ ಸುಮಾರು 10 ಸಾವಿರ ರೂಪಾಯಿ ಬೆಲೆ ಬಾಳುವ ಫ್ಯಾನ್ ಅನ್ನು ಸಂಘದ ಕಾರ್ಯದರ್ಶಿ ಬಿ.ಎಂ.ಹುಚ್ಚೇಗೌಡ ವಾಚ್ಮ್ಯಾನ್ ಮೂಲಕ ಪಟ್ಟಣದ ಬಿ.ಎಂ. ರಸ್ತೆಯಲ್ಲಿ ಇರುವ ಬಸವೇಶ್ವರ ಎಲೆಕ್ಟ್ರಿಕಲ್ಸ್ ಅಂಗಡಿಗೆ ಐದು ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಸಂಘದ ಸದಸ್ಯರಾದ ಬೊಮ್ಮಡಿಗೆರೆ ಬಿ.ಜಿ.ಶ್ರೀನಿವಾಸ್ ಹಾಗೂ ಎ.ಆರ್.ರಾಮಚಂದ್ರು ಠಾಣೆಗೆ ದೂರು ನೀಡಿದ್ದಾರೆ.
ಇನ್ನೊಂದೆಡೆ ದೂರು ನೀಡಿರುವ ವಿಷಯ ತಿಳಿಯುತ್ತಿದಂತೆ ಫ್ಯಾನ್ ಅನ್ನು ಸಂಘಕ್ಕೆ ಹಿಂದಿರುಗಿಸುವ ಪ್ರಯತ್ನ ಮಾಡಲಾಗಿದೆ. ಕಾಲೇಜು ಕಡೆಯ ಬಾಗಿಲು ತೆರೆದು ವಾಚ್ಮನ್ ಶ್ಯಾಮ್ ಅವರನ್ನು ಅಲ್ಲಿಗೆ ಬರುವಂತೆ ಕರೆದ ವಿಚಾರ ತಿಳಿದು, ನಾವು ಗೇಟ್ ಬಳಿ ಪ್ರವೇಶಿಸಿ ವಾಚ್ಮನ್ ವಿಚಾರಿಸಿದಾಗ, ಸಂಘದ ಅಧ್ಯಕ್ಷ ರಾಜಣ್ಣ ಅಲಿಯಾಸ್ ನಂಜುಡಯ್ಯ ಫ್ಯಾನ್ ಬಗ್ಗೆ ಏನು ಗೊತ್ತಿಲ್ಲ ಎಂದು ಹೇಳುವಂತೆ ಹೇಳಿಕೊಟ್ಟಿರುವುದಾಗಿ ವಾಚ್ಮನ್ ಬಾಯ್ಬಿಟ್ಟಿದ್ದಾನೆ.
ಫ್ಯಾನ್ ಅನ್ನು ಆರು ತಿಂಗಳ ಹಿಂದೆಯೇ ಖರೀದಿ ಮಾಡಿದ್ದು, ಅದನ್ನು ಕಡಿಮೆ ಬೆಲೆಗೆ ಸಂಘದ ಕಾರ್ಯದರ್ಶಿ ಬಿ.ಎಂ.ಹುಚ್ಚೇಗೌಡ ಅಂಗಡಿಗೆ ಮಾರಿದ್ದು, ವಿಷಯ ಸಂಘದ ಸದಸ್ಯರಿಗೂ ಗೊತ್ತಾದ ಮೇಲೆ ಮಾರಿದ ಫ್ಯಾನ್ ಸಂಘಕ್ಕೆ ತಂದಿಟ್ಟಿದ್ದಾರೆ.
ಸಂಘದಲ್ಲಿನ ಫ್ಯಾನ್ ಕಳವು ಮಾಡಿ ಮಾರಾಟ ಮಾಡಲು ಯತ್ನಿಸಿರುವುದಿಲ್ಲ, ಎರಡು ವರ್ಷಗಳ ಹಿಂದೆ ಸಂಘದ ಹೆಸರಿನಲ್ಲಿ ಫ್ಯಾನ್ ಖರೀದಿಸಲಾಗಿತ್ತು, ಆ ಫ್ಯಾನ್ ಬಳಕೆ ಮಾಡಲಾಗುತ್ತಿರಲಿಲ್ಲ. ಹಾಗಾಗಿ ಖರೀದಿಸಿರುವ ಅಂಗಡಿಗೆ ಫ್ಯಾನ್ ವಾಪಸ್ ಕಳಿಸಿ ಅದರಿಂದ ಬರುವ ಹಣವನ್ನು ಸಂಘದ ಖಾತೆಗೆ ಜಮಾ ಮಾಡುವ ಉದ್ದೇಶದಿಂದ ಫ್ಯಾನ್ ಕಳಿಸಲಾಗಿತ್ತು, ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ.
|ಬಿ.ಎಂ.ಹುಚ್ಚೇಗೌಡ ಕುಣಿಗಲ್ ತಾಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ