

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಕುಣಿಗಲ್ ಕ್ಷೇತ್ರ ಭಾರೀ ಕುತೂಹಲ ಮೂಡಿಸಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರೇ ತನ್ನ ವಿರುದ್ಧ ಷಡ್ಯಂತ್ರ ನಡೆಸಿದರು ಎಂದು ಈಗಾಗಲೇ ಬಹಿರಂಗ ಅಸಮಾಧಾನ ಹೊರಹಾಕಿರುವ ಮಾಜಿ ಸಂಸದ ಎಸ್ಪಿಎಂ, ಕುಣಿಗಲ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪುನರುಚ್ಛರಿಸುತ್ತಲೇ ಇದ್ದಾರೆ. ಇನ್ನು ಹಾಲಿ ಶಾಸಕ ಡಾ.ರಂಗನಾಥ್ ಅವರೇ ಮುಂದಿನ ಚುನಾವಣೆಗೂ ಕಾಂಗ್ರೆಸ್ ಅಭ್ಯರ್ಥಿ ಎಂದು ಸಂಸದ ಡಿ.ಕೆ.ಸುರೇಶ್ ಈಗಾಗಲೇ ಘೋಷಿಸಿದ್ದಾರೆ. ಅತ್ತ ಮುದ್ದಹನುಮೇಗೌಡರು ಬಿಜೆಪಿಗೆ ಹೋಗ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇನ್ನೂ ಕೆಲವರು ಕಾಂಗ್ರೆಸ್ ತೊರೆಯಲ್ಲ, ಅವರು ಬಂಡಾಯ ಅಭ್ಯರ್ಥಿ ಆಗ್ತಾರೆ ಎಂದೂ ಹೇಳ್ತಿದ್ದಾರೆ.
ಇಷ್ಟೆಲ್ಲಾ ಬೆಳವಣಿಗೆ ನಡುವೆ ಇಂದು(ಗುರುವಾರ) ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮುದ್ದಹನುಮೇಗೌಡರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಉಪಸ್ಥಿತರಿದ್ದರು. ಕಾಂಗ್ರೆಸ್ನಿಂದ ಅಂತರ ಕಾಯ್ದುಕೊಂಡಿದ್ದ ಎಸ್ಪಿಎಂ, ಡಿಕೆಶಿ ಭೇಟಿ ಬಳಿಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ. ಬಳಿಕ ತಮ್ಮ ಮುಂದಿನ ರಾಜಕೀಯ ಕುರಿತು ನಿರ್ಧಾರ ಪ್ರಕಟಿಸಲಿದ್ದಾರೆ ಎನ್ನಲಾಗುತ್ತಿದೆ.
ಅಷ್ಟೇ ಅಲ್ಲ ಬಿಜೆಪಿಗೆ ಹೋಗುವೆ ಎಂಬುದು ಸುಳ್ಳು, ನಾನು ಕಾಂಗ್ರೆಸ್ನಲ್ಲೇ ಇರುವೆ. ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸೋದು ಗ್ಯಾರಂಟಿ ಎಂದಿದ್ದರು. ಇದೀಗ ಡಿಕೆಶಿ ಅವರ ಜತೆ ಯಾವ ವಿಚಾರ ಮಾತುಕತೆ ನಡೆಸಿದರು, ಎಸ್ಪಿಎಂ ಅವರ ಮುಂದಿನ ನಡೆ? ಏನು ಎಂಬುದು ಕ್ಷೇತ್ರದ ಜನರಲ್ಲಿ ಸಹಜವಾಗಿ ಕುತೂಹಲ ಮೂಡಿಸಿದೆ.