

ದಾವಣಗೆರೆ: ವಿಧಾನ ಪರಿಷತ್ ಮಾಜಿ ಸದಸ್ಯ ಮುದೇಗೌಡ್ರ ವೀರಭದ್ರಪ್ಪ(86) ಅವರು ಮಂಗಳವಾರ ನಿಧನರಾದರು.
ದಾವಣಗೆರೆಯ ತರಳಬಾಳು ಬಡಾವಣೆಯಲ್ಲಿ ವಾಸವಿದ್ದ ಮುದೇಗೌಡ್ರ ವೀರಭದ್ರಪ್ಪ ಅನಾರೋಗ್ಯದಿಂದ ಮಂಗಳವಾರ ಬೆಳಗ್ಗೆ ನಿಧನರಾದರು. ಅವರಿಗೆ ಪತ್ನಿ, ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ. ಮೃತರ ಇಚ್ಛೆಯಂತೆ ಅವರ ದೇಹವನ್ನು ದಾವಣಗೆರೆಯ ಜೆಜೆಎಂಸಿ ವೈದ್ಯಕೀಯ ಕಾಲೇಜಿನ ಅಂಗಶಾಸ್ತ್ರ ವಿಭಾಗಕ್ಕೆ ಬುಧವಾರ ಬೆಳಗ್ಗೆ 10.30ಕ್ಕೆ ದಾನ ಮಾಡಲಾಗುವುದು. ಅವರ ಆಸೆಯಂತೆ ಶಿವಗಣಾರಾಧನೆ ಬದಲಾಗಿ ಅದೇ ಹಣವನ್ನು ಅನ್ನದಾನ, ಬಡಮಕ್ಕಳ ಸತ್ಕಾರ್ಯಗಳಿಗೆ ಬಳಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಬಿಎ ಪದವೀಧರರಾಗಿದ್ದ ವೀರಭದ್ರಪ್ಪ ಅವರು 1988ರಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ಗೆ ಚುನಾಯಿತರಾಗಿ, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದ್ದರು. ಮಂಗಳೂರಿನಿಂದ ಪದವೀಧರ ಕ್ಷೇತ್ರದ ಚುನಾವಣೆಗೂ ಸ್ಪರ್ಧಿಸಿದ್ದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ (1977) ಒಂಬತ್ತು ವರ್ಷ ಹಾಗೂ ಕುವೆಂಪು ವಿವಿಯಲ್ಲಿ 11 ವರ್ಷ ಸೆನೆಟ್ ಹಾಗೂ ಸಿಂಡಿಕೇಟ್ ಸದಸ್ಯರಾಗಿ ಮುದೇಗೌಡ್ರ ವೀರಭದ್ರಪ್ಪ ಸೇವೆ ಸಲ್ಲಿಸಿದ್ದರು. ಸೂರತ್ಕಲ್ನ ಕೆಆರ್ಇಸಿ ಕಾಲೇಜಿನಲ್ಲಿ ಆಡಳಿತ ನಿರ್ದೇಶಕರಾಗಿಯೂ, ದಾವಣಗೆರೆಯ ನೂತನ ವಿಜ್ಞಾನ ಪಿಯು ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ದಾವಣಗೆರೆಯಲ್ಲಿ ಪಿಜಿ ಸೆಂಟರ್ ಹಾಗೂ ನೂತನ ವಿವಿ ಸ್ಥಾಪನೆಗೆ ಕಾರಣಕರ್ತರೂ ಆಗಿದ್ದಾರೆ.
ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ರಟ್ಟಿಹಳ್ಳಿಯ ಕಬ್ಬಿಣಕಂಥಿ ಮಠದ ಶ್ರೀಗಳು, ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಶಾಸಕ ಎಂ.ಬಸವರಾಜನಾಯ್ಕ ಹಾಗೂ ಅಭಿಮಾನಿಗಳು ಮುದೇಗೌಡ್ರ ವೀರಭದ್ರಪ್ಪರ ಅಂತಿಮ ದರ್ಶನ ಪಡೆದರು.