ಸಿದ್ದರಾಮೋತ್ಸವ ಬಳಿಕ ನಮಗೆ ಊಟ-ನಿದ್ರೆ ಮಾಡಲಾಗುತ್ತಿಲ್ಲ: ಮಾಜಿ ಸಚಿವ ಈಶ್ವರಪ್ಪ ವ್ಯಂಗ್ಯ

eshwarappa1
Published on

ಶಿವಮೊಗ್ಗ: ದಾವಣಗೆರೆಯಲ್ಲಿ ಆಯೋಜಿಸಿದ್ದ ಸಿದ್ದರಾಮೋತ್ಸವಕ್ಕೆ ಸೇರಿದ್ದ ಜನರನ್ನು ನೋಡಿ ನಾವು(ಬಿಜೆಪಿ) ಪ್ರತಿನಿತ್ಯ ನಿದ್ರೆ, ಊಟ, ಉಪಾಹಾರ ಏನನ್ನೂ ಮಾಡುತ್ತಿಲ್ಲ... ಎಂದು ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ದಾವಣಗೆರೆಯ ಕಾರ್ಯಕ್ರಮದಲ್ಲಿ ಸೇರಿದ್ದ ಜನರನ್ನು ನೋಡಿ ಬಿಜೆಪಿಗೆ ಶಾಕ್​ ಆಗಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಸಿದ್ದರಾಮೋತ್ಸವದಂತಹ ನೂರು ಉತ್ಸವಗಳನ್ನು ಮಾಡಿದ್ದೇವೆ. ಪ್ರತಿ ಬಾರಿಯೂ ಬಿಜೆಪಿ ಒಗ್ಗಟ್ಟಿನಿಂದ ಇಂಥ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್​ ಒಗ್ಗಟ್ಟಾಗಿ ಸಿದ್ದರಾಮಯ್ಯ ಅವರ ಜನ್ಮದಿನ ಆಚರಿಸಿದೆ. ಅದೇ ಅವರಿಗೆ ಸಮಾಧಾನ ಎಂದರು.

ಕಾಂಗ್ರೆಸ್​ ನಾಯಕರು ಒಟ್ಟಾಗಿದ್ದೇವೆಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಸ್​ನಲ್ಲಿ ಒಗ್ಗಟ್ಟು ಮೂಡುವುದು ಸುಳ್ಳು. ಯಾವತ್ತೂ ಅವರು ಒಂದಾಗುವುದಿಲ್ಲ, ಸದ್ಯ ಸಿದ್ದರಾಮೋತ್ಸವ ಕುರಿತು ಚರ್ಚೆ ಬೇಡ. ರಾಷ್ಟ್ರದ್ರೋಹಿಗಳನ್ನು ಬೆಂಬಲಿಸಬೇಡಿ ಎಂಬ ಸಲಹೆ ನೀಡಿದ್ದೆ. 75ನೇ ಜನ್ಮದಿನ ಆಚರಿಸಿ ಸಂಭ್ರಮಪಟ್ಟಿದ್ದಾರೆ. ಎಲ್ಲರೂ ಖುಷಿಯಾಗಿರಲಿ ಎಂದು ಹಾರೈಸಿದರು.

ರಾಹುಲ್​ ಗಾಂಧಿ ಅವರು ಕೈ ಸನ್ನೆ ಮಾಡಿದಂತೆ ಸಿದ್ದರಾಮಯ್ಯ ಅವರನ್ನು ತಬ್ಬಿಕೊಂಡು ಡಿ.ಕೆ.ಶಿವಕುಮಾರ್​ ಶುಭಾಶಯ ಕೋರಿದ್ದಾರೆ. ಕಾಂಗ್ರೆಸ್​ ನಾಯಕರು ಎಂದಿಗೂ ಒಂದಾಗಲ್ಲ. ಕಾಂಗ್ರೆಸ್​ ನಾಯಕರು ಮತ್ತೊಮ್ಮೆ ಅಧಿಕಾರಕ್ಕೇರುವ ಭ್ರಮೆಯಲ್ಲಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ ಮುಖ್ಯಮಂತ್ರಿ ಆಗುವುದಿರಲಿ ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬರುವುದೇ ಅನುಮಾನ ಎಂದು ಲೇವಡಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net