

ಮಳವಳ್ಳಿ: ಮಳವಳ್ಳಿಯಲ್ಲಿ ಲೈಂಗಿಕ ಕಿರುಕುಳಕ್ಕೆ ಬಲಿಯಾದ 10 ವರ್ಷದ ಬಾಲಕಿಯ ನಿವಾಸಕ್ಕೆ ಬುಧವಾರ ಭೇಟಿ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಪಾಲಕರಿಗೆ ಸಾಂತ್ವನ ಹೇಳಿದರು. ಅತ್ಯಾಚಾರಿಗೆ ಮರಣದಂಡನೆ ವಿಧಿಸಬೇಕು ಎಂದು ಆಗ್ರಹಿಸಿದರು.
ಹತ್ತು ವರ್ಷದ ಬಾಲಕಿ ಮೇಲೆ ನಡೆಸಿರುವ ಕೃತ್ಯ ಅಕ್ಷಮ್ಯ ಅಪರಾಧ. ಅತ್ಯಾಚಾರ ಮಾಡಿ, ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿರುವಾತ ರಾಕ್ಷಸರಿಗೂ ಮಿಗಿಲಾದ ಕ್ರೂರಿಯಾಗಿದ್ದು, ಆತನಿಗೆ ಮರಣ ದಂಡನೆಯಾಗಬೇಕು ಎಂದು ಆಗ್ರಹಿಸಿದರು. ಯಾವ ಹೆಣ್ಣು ಮಕ್ಕಳಿಗೂ ಈ ತರಹ ಆಗಬಾರದು. ಹೆಣ್ಣು ಮಕ್ಕಳು ಶಾಲೆ, ಟ್ಯೂಷನ್ಗಳಿಗೆ ಶಿಕ್ಷಕರ ಮೇಲೆ ನಂಬಿಕೆ, ವಿಶ್ವಾಸವಿಟ್ಟು ಹೋಗುತ್ತಾರೆ. ಗುರುಗಳೇ ಈ ರೀತಿ ಮಾಡಿದರೆ ಹೇಗೆ? ಈ ಪ್ರಕರಣ ಒಂದು ರೀತಿಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಕೃತ್ಯ ಎಸಗಿರುವಾತ ಕ್ರೂರ ಪ್ರಾಣಿಗೂ ಕೆಟ್ಟ ರೀತಿಯಲ್ಲಿ ನಡೆದುಕೊಂಡಿದ್ದಾನೆ. ಮನುಷ್ಯ ಕುಲವೇ ತಲೆ ತಗ್ಗಿಸುವಂತೆ ಹೀನ ಕೆಲಸ ಮಾಡಿರುವ ಈ ತರಹದ ಪ್ರಾಣಿಗೆ ಸಮಾಜದಲ್ಲಿ ಉಳಿಗಾಲ ನೀಡಬಾರದು. ಇಂತಹವರಿಗೆ ಮರಣದಂಡನೆ ವಿಧಿಸಬೇಕು. ಪೊಲೀಸರು ಐಪಿಸಿ ಸೆನ್ನಲ್ಲಿರುವ ಕಠಿಣ ಕಾನೂನುಗಳನ್ನು ಹಾಕಬೇಕು ಎಂದರು. ಮಾಜಿ ಸಚಿವರಾದ ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಎಂಎಲ್ಸಿ ಮರಿತಿಬ್ಬೇಗೌಡ ಇದ್ದರು.
10 ಲಕ್ಷ ರೂ. ಚೆಕ್ ವಿತರಣೆ: ಬಾಲಕಿಯ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಭೇಟಿ ನೀಡಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಿಡುಗಡೆಯಾಗಿದ್ದ 10 ಲಕ್ಷ ರೂ. ಚೆಕ್ ಅನ್ನು ಪಾಲಕರಿಗೆ ಹಸ್ತಾಂತರಿಸಿದರು. ಸಂಸದೆ ಸುಮಲತಾ ಅಂಬರೀಷ್, ಶಾಸಕ ಅನ್ನದಾನಿ, ಜಿಲ್ಲಾಧಿಕಾರಿ ಅಶ್ವಥಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ತಹಸೀಲ್ದಾರ್ ಎಂ.ವಿಜಯಣ್ಣ ಇದ್ದರು.