ಲೈಸೆನ್ಸ್​ ಇಲ್ಲದೆ ಓಲಾ, ಉಬರ್​ ಓಡಾಟ: ತಕ್ಷಣ ಆಟೋ ಸೇವೆ ಸ್ಥಗಿತಗೊಳಿಸಲು ನೋಟಿಸ್​ ಜಾರಿ

Ola Uber Rapido
Published on

ಬೆಂಗಳೂರು: ಪರವಾನಗಿ ಪಡೆಯದೆ ಕಾರ್ಯಾಚರಣೆ ಹಾಗೂ ದುಬಾರಿ ಶುಲ್ಕ ವಸೂಲಿ ಹಿನ್ನೆಲೆಯಲ್ಲಿ ತಕ್ಷಣವೇ ಆಟೋ ರಿಕ್ಷಾ ಸೇವೆ ಸ್ಥಗಿತಗೊಳಿಸುವಂತೆ ಆ್ಯಪ್​ ಆಧಾರಿತ ಅಗ್ರಿಗೇಟರ್​ ಕಂಪನಿಗಳಾದ ಓಲಾ, ಉಬರ್​ ಮತ್ತು ರ್ಯಾಪಿಡೋಗೆ ಸಾರಿಗೆ ಇಲಾಖೆ ನೋಟಿಸ್​ ಜಾರಿಗೊಳಿಸಿದೆ. ಕಾನೂನು ಬಾಹಿರವಾಗಿ ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ 3 ದಿನದಲ್ಲಿ ವಿವರಣೆ ಕೊಡಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

ಟ್ಯಾಕ್ಸ್​ ಸೇವೆ ಒದಗಿಸುವ ಸಲುವಾಗಿ ಕರ್ನಾಟಕ ಆನ್​ ಡಿಮ್ಯಾಂಡ್​ ಟ್ರಾನ್ಸ್​ಪೋರ್ಟೆಷನ್​ ಟೆಕ್ನಾಲಜಿ ಅಗ್ರಿಗೇಟರ್​ ನಿಯಮ 2016ರ (ಕೆಒಡಿಟಿಟಿಎ) ಅನ್ವಯ ಅಗ್ರಿಗೇಟರ್​ ಆಗಿ ಕಾರ್ಯನಿರ್ವಹಿಸಲು ಪರವಾನಗಿ ನೀಡಲಾಗಿದೆ. ಚಾಲಕನನ್ನು ಒಳಗೊಂಡಂತೆ 6ಕ್ಕಿಂತ ಹೆಚ್ಚು ಸೀಟಿನ ಸಾಮರ್ಥ್ಯವಿಲ್ಲದ ಮೋಟಾರು ಕ್ಯಾಬ್​ ಸೇವೆಗಷ್ಟೇ ಅನುಮತಿ ಇದೆ. ಆದರೆ, ನಿಯಮ ಉಲ್ಲಂಘಿಸಿ ಆಟೋ ರಿಕ್ಷಾ ಸೇವೆಗಳನ್ನು ಒದಗಿಸಲಾಗುತ್ತಿದೆ.

ಅನುಮತಿ ಪಡೆಯದೆ ಆಟೋಗಳನ್ನು ಕಾರ್ಯಾಚರಣೆ ನಡೆಸುತ್ತಿರುವುದಲ್ಲದೆ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚು ವಸೂಲಿ ಮಾಡುವ ಮುಖೇನ ಪ್ರಯಾಣಿಕರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಸಾರಿಗೆ ಇಲಾಖೆಗೆ ದೂರುಗಳು ಸಲ್ಲಿಕೆಯಾಗಿವೆ. ತಕ್ಷಣದಿಂದಲೇ ಆಟೋಗಳ ಸೇವೆಯನ್ನು ನಿಲ್ಲಿಸಬೇಕು. ಸರ್ಕಾರ ನಿಗದಿಪಡಿಸಿರುವ ದರವನ್ನಷ್ಟೇ ಪಡೆಯಬೇಕು ಎಂದು ಸಾರಿಗೆ ಆಯುಕ್ತ ಕೆ.ಟಿ.ಎಂ.ಕುಮಾರ್​ ನೋಟಿಸ್​ನಲ್ಲಿ ಉಲ್ಲೇಖಿಸಿದ್ದಾರೆ.

ಸಾರಿಗೆ ಇಲಾಖೆ ಅಧಿಕಾರಿಗಳು ಈಗಾಗಲೇ ಹಲವು ಬಾರಿ ಇದೇ ಕಂಪನಿಗಳಿಗೆ ನೋಟಿಸ್​ ಕೊಟ್ಟು ಎಚ್ಚರಿಕೆ ಕೊಟ್ಟಿದ್ದಾರೆ. ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆ ಪತ್ರಗಳನ್ನೂ ಜಪ್ತಿ ಮಾಡಿದ್ದಾರೆ. ಆದರೆ, ಓಲಾ, ಉಬರ್​ ಕಂಪನಿಗಳಿಂದ ನಿಯಮ ಉಲ್ಲಂನೆ ಮಾತ್ರ ನಿಂತಿಲ್ಲ. ಈಗ ಪುನಃ ಆಟೋ ಸೇವೆ ಸ್ಥಗಿತಗೊಳಿಸಲು ನೋಟಿಸ್​ ಕೊಟ್ಟಿದ್ದಾರೆ. ಆದರೆ, ಆಟೋ ಸೇವೆ ನಿಲ್ಲುತ್ತಾ ಅಥವಾ ಕಾನೂನು ಬಾಹಿರವಾಗಿ ಮುಂದುವರಿಯುತ್ತಾ ನೋಡಬೇಕಿದೆ.

ಟ್ಯಾಕ್ಸಿ ಸೇವೆ ಸ್ಥಗಿತಕ್ಕೆ ಆದೇಶ: ಕೆಒಡಿಟಿಟಿಎ ಕಾಯ್ದೆಯಡಿ ಅನುಮತಿ ಪಡೆಯದೆ ರೊಪ್ಪೆನ್​ ಟ್ರಾನ್ಸ್​ಪೋರ್ಟೇಷನ್​ ಪ್ರೈವೇಟ್​ ಲಿಮಿಟೆಡ್​, ರ್ಯಾಪಿಡೋ ಆ್ಯಪ್​ ಮೂಲಕ ಟ್ಯಾಕ್ಸಿ, ಆಟೋ ರಿಕ್ಷಾ ಮತ್ತು ಬೈಕ್​ ಸೇವೆ ಒದಗಿಸುತ್ತಿರುವುದು ಸಾರಿಗೆ ಇಲಾಖೆ ಗಮನಕ್ಕೆ ಬಂದಿದೆ. ಕೂಡಲೇ ಆ್ಯಪ್​ ಆಧಾರಿತ ಟ್ಯಾಕ್ಸಿ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಆಯುಕ್ತರು ಸೂಚನೆ ಕೊಟ್ಟಿದ್ದಾರೆ. ಸ್ವಂತಕ್ಕೆ ಬಳಸುವ ದ್ವಿಚಕ್ರ ವಾಹನಗಳು ಹಾಗೂ ಸಾರಿಗೇತರ ದ್ವಿಚಕ್ರ ವಾಹನಗಳನ್ನು ಬೈಕ್​ ಟ್ಯಾಕ್ಸಿಗಳಾಗಿ ಬಳಕೆ ಮಾಡಿದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಹೈಕೋರ್ಟ್​ ಆದೇಶಿಸಿದೆ. ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಕೋರ್ಟ್​ಗೆ ವರದಿ ಸಲ್ಲಿಸಬೇಕು ಎಂಬುದರ ಬಗ್ಗೆಯೂ ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ.

ಟ್ಯಾಕ್ಸಿ ಇಳಿದಾಗ 100 ರೂ. ಜಾಸ್ತಿ!: ಓಲಾ ಮತ್ತು ಉಬರ್​ ಟ್ಯಾಕ್ಸಿ ಸೇವೆಗೆ ಸರ್ಕಾರ ನಿಗದಿ ಪಡಿಸಿರುವುದಕ್ಕಿಂತ ಹೆಚ್ಚುವರಿಯಾಗಿ 100 ರೂ. ವಸೂಲಿ ಮಾಡಲಾಗುತ್ತಿದೆ. ಟ್ಯಾಕ್ಸಿ ಹತ್ತುವಾಗ ತೋರಿಸುವ ಮೊತ್ತಕ್ಕಿಂತ ಇಳಿಯುವಾಗ 100 ರೂ. ಹೆಚ್ಚುವರಿ ಆಗಿರುತ್ತದೆ. ವೃತ್ತಿಯಲ್ಲಿ ಪುರೋಹಿತರಾಗಿರುವ ಸಿ.ಪವನ್​ ಈ ಕುರಿತು ಮಾಹಿತಿ ನೀಡಿದ್ದಾರೆ. 'ಬಸವೇಶ್ವರನಗರಿಂದ ಕೆಂಗೇರಿ ಉಪನಗರಕ್ಕೆ ಹೋಗಲು ಉಬರ್​ ಟ್ಯಾಕ್ಸಿ ಬುಕ್​ ಮಾಡಿದ್ದೆ. ಟ್ಯಾಕ್ಸಿ ಹತ್ತುವಾಗ ಆ್ಯಪ್​ನಲ್ಲಿ 221 ರೂ. ತೋರಿಸಿತ್ತು. ಆದರೆ, ಕೆಂಗೇರಿ ಉಪನಗರದಲ್ಲಿ ಇಳಿಯುವಾಗ 313 ರೂ. ಭರಿಸಲು ಚಾಲಕ ಕೇಳಿದ್ದ. ಚಾಲಕನೊಂದಿಗೆ ಗಲಾಟೆ ಮಾಡಿ, ಕೊನೆಗೆ ಉಬರ್​ ಕಂಪನಿ ನಂಬರ್​ ಪಡೆದು ಕರೆ ಮಾಡಿದ್ದೆ. ಆದರೆ, ಯಾರೊಬ್ಬರೂ ಪ್ರಯಾಣ ದರ ಹೆಚ್ಚು ವಸೂಲಿ ಬಗ್ಗೆ ಸೂಕ್ತ ಮಾಹಿತಿ ಕೊಡಲಿಲ್ಲ' ಎಂದು ಪವನ್​ ಹೇಳುತ್ತಾರೆ.

ಪೀಕ್​ ಹವರ್​ ರೇಟ್​ ಕಳ್ಳಾಟ: ಬೇಡಿಕೆ ಹೆಚ್ಚಿರುವ ಸಂದರ್ಭದಲ್ಲಿ ಪ್ರಯಾಣಿಕರಿಗೆ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದರೆ, ಹೆಚ್ಚುವರಿಯಾಗಿ ವಸೂಲಿ ಮಾಡಿದ ದರ ಟ್ಯಾಕ್ಸಿ ಚಾಲಕರು ಅಥವಾ ಮಾಲೀಕರಿಗೆ ನೀಡುವುದಿಲ್ಲ. ಓಲಾ, ಉಬರ್​ ಕಂಪನಿಗಳೇ ಇಟ್ಟುಕೊಳ್ಳುತ್ತವೆ. ಅಲ್ಲದೆ, ಒಟ್ಟಾರೆ ಆದಾಯದಲ್ಲಿ ಬರೀ ಬುಕ್ಕಿಂಗ್​ ಸೇವೆ ಒದಗಿಸುವ ಓಲಾ, ಉಬರ್​ ಶೇ.30 ಕಮೀಷನ್​ ಪಡೆಯುತ್ತವೆ. ಶೇ.70 ಟ್ಯಾಕ್ಸಿ ಚಾಲಕರಿಗೆ ನೀಡಲಾಗುತ್ತಿದೆ. ಸರ್ಕಾರದ ನಿರ್ದೇಶನದ ಪ್ರಕಾರ ಅಗ್ರಿಗೇಟರ್​ ಕಂಪನಿಗಳು ಶೇ.10 ರಿಂದ ಶೇ.15 ಕಮೀಷನ್​ ಪಡೆಯಬೇಕು. ಆದರೆ, ನಿಯಮ ಉಲ್ಲಂಘಿಸಿ ಶೇ.30 ಸಂಗ್ರಹಿಸಲಾಗುತ್ತಿದೆ.

ಸಾರಿಗೆ ಇಲಾಖೆಯ ದಿವ್ಯ ನಿರ್ಲಕ್ಷ್ಯ: ಅಗ್ರಿಗೇಟರ್​ ಕಂಪನಿಗಳಲ್ಲಿ ಓಲಾ ಹಾಗೂ ಉಬರ್​ ಪ್ರಮುಖವಾಗಿವೆ. ಬೆಂಗಳೂರಲ್ಲೇ 1.97 ಲ ಕ್ಯಾಬ್​ಗಳಿರುವ ಅಂದಾಜಿದೆ. ಆದರೆ, ಈ ಎರಡೂ ಕಂಪನಿಗಳ ಪರವಾನಗಿ ಮುಗಿದರೂ ನವೀಕರಣಗೊಳಿಸದೆ ಅನಧಿಕೃತವಾಗಿ ಕಾರ್ಯಾಚರಣೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಹಲವು ಬಾರಿ ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಸಾರಿಗೆ ಇಲಾಖೆ ಅಧಿಕಾರಿಗಳು ನಾಮ್​ಕೇ ವಾಸ್ತೆಗೆ ನೋಟಿಸ್​ ಕೊಟ್ಟು ಸುಮ್ಮನಾಗಿದ್ದರು. 2017ರಲ್ಲಿ ಅಗ್ರಿಗೇಟರ್​ ಲೈಸೆನ್ಸ್​ ಪಡೆದಿದ್ದ ಓಲಾ, ಉಬರ್​ನ ಅವಧಿ 2021ರಲ್ಲೇ ಮುಗಿದಿದೆ. ಸಾರಿಗೆ ಇಲಾಖೆಗೆ ಮಾಹಿತಿ ಕೊಡದ ಕಚೇರಿಗಳನ್ನೂ ಬದಲಾಯಿಸಿದೆ. 2021ರಲ್ಲೇ ಅಧಿಕಾರಿಗಳು ನೋಟಿಸ್​ ಜಾರಿ ಮಾಡಿ, ದಾಳಿ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net