ಅಜ್ಜಿಯನ್ನೇ ಕೊಂದ ಮೊಮ್ಮಗ! 3 ತಿಂಗಳು ಶವದೊಂದಿಗೆ ವಾಸವಿದ್ದ ಅಮ್ಮ-ಮಗ... 5 ವರ್ಷದ ಬಳಿಕ ಸಿಕ್ಕಿಬಿದ್ದದ್ದೇ ರೋಚಕ

murder case
Published on

ಬೆಂಗಳೂರು: ಇದು ಬೆಂಗಳೂರಿನ ಪ್ರಕರಣ. ಈ ಸ್ಟೋರಿ ಯಾವ ಕ್ರೈಂ ಥ್ರಿಲ್ಲರ್ ಸಿನಿಮಾಗೂ ಕಡಿಮೆ ಇಲ್ಲ. ಗೋಬಿ ಮಂಚೂರಿ ವಿಷಯಕ್ಕೆ ಅಜ್ಜಿಯನ್ನೇ ಕೊಂದು ಶವದ ಜತೆ 3 ತಿಂಗಳು ವಾಸವಿದ್ದರು ತಾಯಿ-ಮಗ! ಇದಾದ 6 ತಿಂಗಳ‌ ಬಳಿಕ ಅಜ್ಜಿ ಹತ್ಯೆಯ ರಹಸ್ಯ ಬಯಲಾಗಿದ್ದೇ ರೋಚಕ..! ಅಂದು ತಲೆ ಮರೆಸಿಕೊಂಡಿದ್ದ ಆರೋಪಿಗಳು ಇದೀಗ ಅಂದರೆ 5 ವರ್ಷದ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ...

ಕೆಂಗೇರಿ ಸ್ಯಾಟಲೈಟ್​ ಸಮೀಪದ ಮನೆಯೊಂದರಲ್ಲಿ 69 ವರ್ಷದ ವೃದ್ಧೆ ಶಾಂತಕುಮಾರಿ, ಮಗಳು ಶಶಿಕಲಾ ಮತ್ತು ಮೊಮ್ಮಗ ಸಂಜಯ್​ ಜೊತೆ ವಾಸವಿದ್ದರು. ಸಂಜಯ್​ ಏರೋನಾಟಿಕ್ಸ್ ಇಂಜಿನಿಯರಿಂಗ್​ ಓದುತ್ತಿದ್ದ. ಅದು 2016ರ ಆಗಸ್ಟ್​ ತಿಂಗಳು. ಒಂದು ದಿನ ಕಾಲೇಜಿನಿಂದ ಮನೆ ಬರುವಾಗ ಅಜ್ಜಿಗೆ ಗೋಬಿ ಮಂಚೂರಿ ತಂದುಕೊಟ್ಟಿದ್ದ. ಅತಿಯಾದ ಮಡಿವಂತಿಕೆ, ಶಿಸ್ತಿನಿಂದ ಇರುತ್ತಿದ್ದ ಅಜ್ಜಿ, ಗೋಬಿ ಮಂಚೂರಿ ಬೇಡ ಎಂದು ಮೊಮ್ಮಗನ ಮುಖಕ್ಕೆ ಎಸೆದಿದ್ದರು. ಇದರಿಂದ ಸಿಟ್ಟಿಗೆದ್ದ ಮೊಮ್ಮಗ, ಲಟ್ಟಣಿಗೆಯಿಂದ ಅಜ್ಜಿಗೆ ಮನಸೋಇಚ್ಛೆ ಹೊಡೆದಿದ್ದ. ತೀವ್ರ ರಕ್ತಸ್ರಾವವಾಗಿ ಅಜ್ಜಿ ಮೃತಪಟ್ಟಿದ್ದರು.

ಅಜ್ಜಿಯನ್ನು ಮೊಮ್ಮಗನೇ ಕೊಂದಿರುವ ವಿಚಾರ ತಿಳಿದು ಶಾಕ್​ ಆದ ಶಶಿಕಲಾ, ಪೊಲೀಸರಿಗೆ ಮಾಹಿತಿ ನೀಡಲು ಮುಂದಾಗಿದ್ದರು. ಈ ವೇಳೆ 'ಅಮ್ಮ, ನೀನೇ ನಿನ್ನ ಮಗನನ್ನು ಜೈಲಿಗೆ ಕಳಿಸ್ತೀಯಾ? ಬೇಡ ಅಮ್ಮ' ಎಂದು ಗೋಳಾಡಿದ್ದ. ಮಗನನ್ನು ಕಳೆದುಕೊಳ್ಳುವ ಆತಂಕ ಶಶಿಕಲಾಗೆ ಮೂಡಿತ್ತು. ಕೊನೆಗೆ ಕೊಲೆ ರಹಸ್ಯ ಬಚ್ಚಿಡಲು ಅಮ್ಮ-ಮಗ ಇಬ್ಬರೂ ಯೋಜನೆ ರೂಪಿಸಿದ್ದರು. ಇದಕ್ಕಾಗಿ ಸಂಜಯ್​ ತನ್ನ ಸ್ನೇಹಿತ ನಂದೀಶ್​ನ ಸಹಾಯ ಪಡೆದಿದ್ದ. ಮೂವರೂ ಸೇರಿಕೊಂಡು ಮನೆಯ ಕಬೋರ್ಡ್​ನಲ್ಲೇ ಶವ ಇಟ್ಟು ಕೆಮಿಕಲ್ ಹಾಕಿ ಸಿಮೆಂಟ್ ಪ್ಲಾಸ್ಟರಿಂಗ್ ಮಾಡಿದ್ದರು.

ಎಲ್ಲವೂ ಸರಿ ಆಯಿತೆಂದು ನಿಟ್ಟುಸಿರು ಬಿಟ್ಟಿದ್ದರು. 3 ತಿಂಗಳು ಶವ ಇರುವ ಮನೆಯಲ್ಲೇ ವಾಸವಿದ್ದರು. ಅಷ್ಟರಲ್ಲಿ ಶವದ ವಾಸನೆ ಬರಲಾರಂಭಿಸಿತ್ತು. ಪುನಃ ಬಣ್ಣ ಬಳಿದು ಪ್ಲಾಸ್ಟರಿಂಗ್ ಮಾಡಿದ್ದರು. ಬಳಿಕ ಊರಿಗೆ ಹೋಗಿ ಬರ್ತೀವಿ ಅಂತಾ ಮನೆ ಮಾಲೀಕನಿಗೆ ಹೇಳಿ, ತಾಯಿ-ಮಗ ಇಬ್ಬರೂ ಊರು ಬಿಟ್ಟಿದ್ದರು. 6 ತಿಂಗಳಾದರೂ ಮನೆಗೆ ವಾಪಸ್​ ಬಂದಿರಲಿಲ್ಲ. ತಾಯಿ-ಮಗ ಇಬ್ಬರೂ ಶಿವಮೊಗ್ಗ ಜಿಲ್ಲೆ ಸಾಗರದತ್ತ ಪರಾರಿಯಾಗಿದ್ದರು.

ರಿಪೇರಿ ಕೆಲಸಕ್ಕಾಗಿ 2017ರ ಮೇ 7ರಂದು ಮಾಲೀಕ ಮನೆಯ ಬೀಗ ತೆರೆದಾಗ ರಕ್ತಸಿಕ್ತ ಸೀರೆ ಪತ್ತೆಯಾಗಿತ್ತು. ತಕ್ಷಣ ಪೊಲೀಸರಿಗೆ ಮಾಹಿತಿ ರವಾನಿಸಿ, ಕಬೋರ್ಡ್ ತೆರೆದು ನೋಡಿದಾಗ ಶವದ ಕಳೇಬರ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಕೆಂಗೇರಿ ಠಾಣೆ ಪೊಲೀಸರು, ಸಂಜಯ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ನಂದೀಶ್​ನನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಬಯಲಾಗಿತ್ತು. 5 ವರ್ಷಗಳಿಂದಲೂ ಪೊಲೀಸರಿಗೆ ಸಿಗದೆ ಆರೋಪಿಗಳು ತಲೆಮರೆಸಿಕೊಂಡಿದ್ದರು. ಕೊನೆಗೂ ಆರೋಪಿಗಳನ್ನು ಕಂಗೇರಿ ಪೊಲೀಸರು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಬಂಧಿಸಿದ್ದಾರೆ. ಕೊಲ್ಹಾಪುರದಲ್ಲಿ ತಾಯಿಯೊಂದಿಗೆ ವಾಸವಿದ್ದ ಸಂಜಯ್, ಹೋಟೆಲ್​ನಲ್ಲಿ ಸರ್ವರ್ ಕೆಲಸ ಮಾಡಿಕೊಂಡಿದ್ದ. ತಾಯಿ ಶಶಿಕಲಾ ಮನೆಗೆಲಸ ಹಾಗೂ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net