ಫ್ಯಾಟ್​ ಬರ್ನ್​ ಸರ್ಜರಿ ಪ್ರಾಣಕ್ಕೆ ಕುತ್ತು ತರುತ್ತಾ? ನಟಿ ಚೇತನಾ ಸಾವಿನ ಬೆನ್ನಲ್ಲೇ ಮಹತ್ವದ ವಿಚಾರ ತಿಳಿಸಿದ ವೈದ್ಯರು

1278407
Published on

ಬೆಂಗಳೂರು: ಬೊಜ್ಜು ಕರಗಿಸುವ ಶಸ್ತ್ರಚಿಕಿತ್ಸೆ (ಫ್ಯಾಟ್​ ರಿಡಕ್ಷನ್​ ಸರ್ಜರಿ) ಮಾಡಿಸಿಕೊಳ್ಳಲು ಹೋಗಿ ಕಿರುತೆರೆ ನಟಿ ಚೇತನಾ ರಾಜ್​ (21) ದುರಂತ ಅಂತ್ಯ ಕಂಡಿದ್ದಾರೆ. ಇವರ ಸಾವಿನ ಬೆನ್ನಲ್ಲೇ ಫ್ಯಾಟ್​ ರಿಡಕ್ಷನ್​ ಸರ್ಜರಿ ಪ್ರಾಣಕ್ಕೆ ಕುತ್ತು ತರುತ್ತಾ? ಈ ಸರ್ಜರಿ ಅಪಾಯಕಾರಿನಾ? ಎಂಬಿತ್ಯಾದಿ ಪ್ರಶ್ನೆಗಳು ಹಲವರಲ್ಲಿ ಮೂಡಿದೆ.

ದೇಹದ ಸೌಂದರ್ಯ ಆಕರ್ಷಕವಾಗಿಸಲು ಬೊಜ್ಜು ಕರಗಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗುವವರ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದ್ದು, ಇದೀಗ ಚೇತನಾ ರಾಜ್​ರ ಸಾವು ಭಯ ಹುಟ್ಟಿಸಿದೆ. ಈ ಕುರಿತು ವಿಜಯವಾಣಿಗೆ ಪ್ರತಿಕ್ರಿಯಿಸಿರುವ ವೈದ್ಯರು ಮಹತ್ವದ ವಿಚಾರ ತಿಳಿಸಿದ್ದಾರೆ.

ಲಿಪೋಸಕ್ಷನ್​ ಸರ್ಜರಿ ಎಂದರೆ ದೇಹದಲ್ಲಿ ಶೇಖರಣೆಯಾಗಿರುವ ಅನಗತ್ಯ ಬೊಜ್ಜನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದು ದೇಹಕ್ಕೆ ಸುಂದರ ಆಕಾರ ನೀಡುವುದಾಗಿದೆ. ಈ ಚಿಕಿತ್ಸೆ ಇಂದು ನಿನ್ನೆಯದ್ದಲ್ಲ. ಹಲವು ವರ್ಷಗಳಿಂದ ಇದೆ. ಹಾಗಾಗಿ ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಬದಲಿಗೆ ಚಿಕಿತ್ಸೆ ನೀಡುವ ಮುನ್ನ ರಕ್ತ ಪರೀಕ್ಷೆ, ರಕ್ತದ ಒತ್ತಡ, ಮಧುಮೇಹ ರೋಗಿಯ ಆರೋಗ್ಯ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅವಲೋಕನ ಮಾಡಬೇಕು. ನಂತರ ಅಗತ್ಯ ಎಚ್ಚರಿಕೆ ಕ್ರಮಗಳೊಂದಿಗೆ ಚಿಕಿತ್ಸೆ ನಡೆಸಬೇಕು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈ ರೀತಿಯ ಸಮಸ್ಯೆಗಳಿಗೆ ತಿಂಗಳಿಗೆ 8-10 ಮಂದಿ ಚಿಕಿತ್ಸೆ ಪಡೆಯುತ್ತಾರೆ ಎನ್ನುತ್ತಾರೆ ವಿಕ್ಟೋರಿಯಾ ಆಸ್ಪತ್ರೆಯ ಪ್ಲಾಸ್ಟಿಕ್​ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ಕೆ.ಟಿ. ರಮೇಶ್​.

ದೇಹದ ಯಾವ ಭಾಗಗಳಲ್ಲಿ ಹೆಚ್ಚುವರಿ ಕೊಬ್ಬು ಶೇಖರಣೆ ಆಗಿರುತ್ತದೆಯೋ ಅದನ್ನು ಮಾತ್ರವೇ ಚಿಕಿತ್ಸೆ ಮೂಲಕ ತೆಗೆಯಲಾಗುತ್ತದೆ. ಹೊಟ್ಟೆ, ತೊಡೆ, ಸೊಂಟ ಸೇರಿದಂತೆ ಹೆಚ್ಚು ಕೊಬ್ಬು ಶೇಖರಣೆಯಾಗಿರುವ ಭಾಗಗಳಲ್ಲಿ ಸಣ್ಣ ರಂಧ್ರ ಮಾಡಿ ಕೊಬ್ಬನ್ನು ಹೊರತೆಗೆದು ದೇಹಕ್ಕೆ ಸುಂದರ ಆಕಾರ ನೀಡುವುದೇ ಲಿಪೋಸಕ್ಷನ್​ ಸರ್ಜರಿ ವಿಧಾನ. ಸೆಲೆಬ್ರಿಟಿಗಳು ಸಹಜವಾಗಿ ಇದನ್ನು ಹೆಚ್ಚು ಮಾಡಿಸಿಕೊಳ್ಳುತ್ತಾರೆ ಎಂದು ರಮೇಶ್​ ತಿಳಿಸಿದರು.

ಎಚ್ಚರಿಕೆ ಅಗತ್ಯಗತ್ಯ: ದೇಹದ ಬೊಜ್ಜು ಕರಗಿಸಿ ದೇಹಕ್ಕೆ ಸುಂದರ ಆಕಾರ ನೀಡುವ ಲಿಪೋಸಕ್ಷನ್​ ಸರ್ಜರಿಯಿಂದ ಎಲ್ಲರಿಗೂ ಸಮಸ್ಯೆ ಆಗುವುದಿಲ್ಲ. ಸರ್ಜರಿಗೆ ಹೋಗುವ ಮುನ್ನ ಕೆಲ ವಿಚಾರ ತಿಳಿದಿರಬೇಕು. ಅನುಭವಿ ವೈದ್ಯರು ಹಾಗೂ ಸುಸಜ್ಜಿತ ವೈದ್ಯಕೀಯ ಸೌಲಭ್ಯ ಹೊಂದಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಸೂಕ್ತ. ಆರೋಗ್ಯ ತಪಾಸಣೆ ಜತೆಗೆ ಚಿಕಿತ್ಸೆ ವೇಳೆ ಅಗತ್ಯ ಎಚ್ಚರಿಕೆ ಕ್ರಮಗಳನ್ನು ವಹಿಸುವುದು ಒಳ್ಳೆಯದು ಎನ್ನುತ್ತಾರೆ ಕಾಸ್ಮೆಟಿಕ್​ ಸರ್ಜನ್​ ಡಾ. ಪ್ರಿಯದರ್ಶನ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net