ಪಾಳು ಬಿದ್ದಿದ್ದ ಕಟ್ಟಡಕ್ಕೆ ಮರುಜೀವ

Oplus_131072
ನಂಜನಗೂಡು ತಾಲೂಕು ಚುಂಚನಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಆವರಣವನ್ನು ಶುಚಿ ಮಾಡುವ ಮೂಲಕ ಆರೋಗ್ಯ ಕೇಂದ್ರವನ್ನಾಗಿ ಪರಿವರ್ತಿಸಲಾಯಿತು.
Published on

ನಂಜನಗೂಡು: ತಾಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ಪಾಳು ಬಿದ್ದಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡವನ್ನು ಮೈಸೂರು ಮಹಾರಾಜ ಕಾಲೇಜಿನ ಎನ್ನೆಸ್ಸೆಸ್ ಶಿಬಿರಾರ್ಥಿಗಳು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿ, ಮರುಬಳಕೆಗೆ ಯೋಗ್ಯವನ್ನಾಗಿ ಮಾಡಿದ್ದಾರೆ.

ಚುಂಚನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ವಾರ್ಷಿಕ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಭಾಗವಾಗಿ ಶಿಬಿರಾರ್ಥಿಗಳು ಪಾಳು ಬಿದ್ದಿದ್ದ ಶಾಲಾ ಕಟ್ಟಡಕ್ಕೆ ಶ್ರಮದಾನದ ಮೂಲಕ ಮರುಜೀವ ನೀಡಿದ್ದಾರೆ.

ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚುವರಿಯಾಗಿ ಕೊಠಡಿಯನ್ನು ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿ, ಆವರಣದಲ್ಲಿ ಹೈಟೆಕ್ ಶೌಚಗೃಹ ಮತ್ತು ವೇದಿಕೆಯನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿತ್ತು. ಕೆಲವು ವರ್ಷಗಳ ಕಾಲ ಇದೇ ಕಟ್ಟಡದಲ್ಲಿ 8ನೇ ತರಗತಿಯನ್ನು ನಡೆಸಲಾಗುತ್ತಿತ್ತು. ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಪಾಲಕರು ಒಳಗಾಗಿ ಕಾಲಕ್ರಮೇಣ ಸರ್ಕಾರಿ ಶಾಲೆಗೆ ಮಕ್ಕಳ ಹಾಜರಾತಿ ಕೊರತೆಯಿಂದಾಗಿ ಕಟ್ಟಡ ಪಾಳು ಬಿದ್ದಿತ್ತು. ಗಿಡಗಂಟಿಗಳು ಬೆಳೆದು ನಿಂತು ಹಾವು-ಚೇಳುಗಳ ವಾಸಸ್ಥಾನವಾಗಿತ್ತು.

ಮೈಸೂರು ಮಹಾರಾಜ ಕಾಲೇಜಿನ ಎನ್ನೆನ್ನೆಸ್ ಶಿಬಿರಾಧಿಕಾರಿಗಳಾದ ಡಾ.ಎಸ್.ಕೃಷ್ಣಪ್ಪ ಮತ್ತು ಡಾ.ಪಿ.ಎಸ್.ಮಧುಸೂದನ್ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ಶಾಲೆಯಲ್ಲಿ ಬೆಳೆದಿದ್ದ ಬೃಹತ್ ಗಾತ್ರದ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ ಕಟ್ಟಡಕ್ಕೆ ಮರುಜೀವ ನೀಡಿದ್ದಾರೆ. ಗ್ರಾಮಸ್ಥರು ಕೂಡ ಸಾಥ್ ನೀಡಿದರು. ಎನ್ನೆಸ್ಸೆಸ್ ಶಿಬಿರಾರ್ಥಿಗಳಿಂದಲೇ ಟೇಪ್ ಕತ್ತರಿಸುವ ಮೂಲಕ ಕಟ್ಟಡವನ್ನು ಉದ್ಘಾಟನೆ ಮಾಡಿರುವುದಲ್ಲದೆ ಚುಂಚನಹಳ್ಳಿ ಪ್ರಾಥಮಿಕ ಆರೋಗ್ಯ ಉಪ ಕೇಂದ್ರವನ್ನಾಗಿ ಮಾಡಿದ್ದಾರೆ.

ಈ ಕಾರ್ಯಕ್ಕೆ ಎನ್ನೆಸ್ಸೆಸ್ ಶಿಬಿರಾರ್ಥಿಗಳಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿಬಿರಾಧಿಕಾರಿಗಳಾದ ಡಾ.ಎಸ್.ಕೃಷ್ಣಪ್ಪ, ಡಾ.ಪಿ.ಎಸ್ ಮಧುಸೂದನ್, ಶಿಬಿರದ ನಾಯಕರಾದ ಭಾಗ್ಯಾ, ಭಾರ್ಗವ್, ವನಜಾಕ್ಷಿ, ಮೋಹನ್, ಶಿಬಿರಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net