ಕರೊನಾ ಮಧ್ಯೆ ರಾಜ್ಯದಲ್ಲೀಗ ವಿಚಿತ್ರ ಜ್ವರ!; ದಾವಣಗೆರೆ ಬಳಿಕ ಕೊಡಗಿನಲ್ಲೂ ಆತಂಕ, ಮಕ್ಕಳನ್ನೇ ಬಾಧಿಸುತ್ತಿರುವ ರೋಗ..

Fever
ಜ್ವರ ಕಾಣಿಸಿಕೊಂಡ ಪ್ರದೇಶಕ್ಕೆ ಭೇಟಿ ನೀಡಿರುವ ಆರೋಗ್ಯ ಸಿಬ್ಬಂದಿ
Published on

ಕೊಡಗು: ರಾಜ್ಯದಲ್ಲಿ ಮಕ್ಕಳನ್ನು ವಿಚಿತ್ರ ಜ್ವರ ಕಾಡುತ್ತಿದ್ದು, ದಾವಣಗೆರೆ ಬಳಿಕ ಇದೀಗ ಕೊಡಗಿನಲ್ಲೂ ಆತಂಕ ಉಂಟಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ವಿಚಿತ್ರ ಜ್ವರದಿಂದ ಬಳಲುತ್ತಿದ್ದ 171 ಮಕ್ಕಳು ಆಸ್ಪತ್ರೆಗೆ ದಾಖಲಾಗಿರುವ ಬೆನ್ನಿಗೇ ಕೊಡಗಿನಲ್ಲೂ ಮಕ್ಕಳನ್ನು ವಿಚಿತ್ರ ಜ್ವರ ಕಾಡುತ್ತಿರುವುದು ಬೆಳಕಿಗೆ ಬಂದಿದೆ.

ಕೊಡಗಿನ ಕುಶಾಲನಗರ ತಾಲೂಕಿನ ಮುಳ್ಳುಸೋಗೆ ಗ್ರಾಮದ ಜನತಾ ಕಾಲನಿಯ ಮಕ್ಕಳಲ್ಲಿ ಈ ವಿಚಿತ್ರ ಜ್ವರ ಕಾಣಿಸಿಕೊಂಡಿದೆ. ಚಿಕ್ಕಚಿಕ್ಕ ಮಕ್ಕಳಲ್ಲೇ ಈ ಜ್ವರ ಕಾಣಿಸಿಕೊಳ್ಳುತ್ತಿದ್ದು, ಜ್ವರ ತೀವ್ರಗೊಂಡಂತೆ ಮಕ್ಕಳಲ್ಲಿ ತುರಿಕೆಯೂ ಉಂಟಾಗುತ್ತಿದ್ದು, ವಾಂತಿಗೂ ಒಳಗಾಗುತ್ತಿದ್ದಾರೆ.

ಈ ಮಕ್ಕಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರೂ ಡೆಂಘೆ, ಚಿಕೂನ್​ಗುನ್ಯಾ ಇರುವುದು ಪತ್ತೆಯಾಗಿಲ್ಲ. ಕರೊನಾ ಇರಬಹುದೇ ಎಂದು ಪರೀಕ್ಷೆ ಮಾಡಿಸಿದರೂ ಕೋವಿಡ್ ಸೋಂಕು ಕೂಡ ಪತ್ತೆಯಾಗಿಲ್ಲ, ಕೋವಿಡ್ ಪರೀಕ್ಷೆ ವರದಿ ನೆಗೆಟಿವ್ ಎಂದೇ ಬಂದಿದ್ದೆ. ಆದರೂ ಮಕ್ಕಳು ಜ್ವರದಿಂದ ಬಳಲುತ್ತಿರುವುದು ವಿಚಿತ್ರ ಎನಿಸಿದೆ.

ಹೀಗೆ ವಿಚಿತ್ರ ಜ್ವರದಿಂದ ಬಳಲುತ್ತಿರುವ ಮಕ್ಕಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಜ್ವರದಿಂದ ಮಕ್ಕಳ ಪಾಲಕರು ಆತಂಕಗೊಂಡಿದ್ದು, ಗ್ರಾಮಕ್ಕೆ ಭೇಟಿ ನೀಡಿರುವ ಆರೋಗ್ಯಾಧಿಕಾರಿಗಳು ಆತಂಕ ಪಡದಂತೆ ಪಾಲಕರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. ಈ ಜ್ವರ ಸೊಳ್ಳೆ ಕಡಿತದಿಂದ ಬಂದಿರಬಹುದು ಎಂದು ಸದ್ಯಕ್ಕೆ ಅಂದಾಜಿಸಲಾಗಿದೆ. ಹೀಗೆ ಜ್ವರಕ್ಕೆ ಒಳಗಾಗಿರುವ ಮಕ್ಕಳನ್ನು ಕುಶಾಲನಗರದಲ್ಲಿ ಮಕ್ಕಳ ವೈದ್ಯರಿಂದ ಚಿಕಿತ್ಸೆ ಕೊಡಿಸಲು ಸಲಹೆ ನೀಡಲಾಗಿದ್ದು, ಅವರನ್ನು ಹೊರ ಜಿಲ್ಲೆಗೆ ಶಿಫಾರಸು ಮಾಡದಂತೆ ಕೊಡಗು ಜಿಲ್ಲಾ ಆರೋಗ್ಯಾಧಿಕಾರಿ ವೆಂಕಟೇಶ್ ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net