

ಹನೂರು: ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ದೇವರ ದರ್ಶನ ಪಡೆಯುವ ವಿಶೇಷ ದರದ ಟಿಕೆಟ್ ಕೌಂಟರ್ನಲ್ಲಿ ಗುರುವಾರ ಸಿಬ್ಬಂದಿ ಎಡವಟ್ಟಿನಿಂದ ಭಕ್ತನೊಬ್ಬನ ಕೈ ಸೇರಿದ್ದ 2.93 ಲಕ್ಷ ರೂಪಾಯಿ ಶನಿವಾರ ಸಂಜೆ ಪ್ರಾಧಿಕಾರದ ಕೈ ಸೇರಿದೆ.
ಬೆಂಗಳೂರಿನ ದಾಸರಹಳ್ಳಿ ತಾಲೂಕು ಮೇದರಹಳ್ಳಿ ಗ್ರಾಮ ನಿವಾಸಿ, ಭಕ್ತ ವೆಂಕಟೇಶ್ಮೂರ್ತಿ ಅವರು ಹಣವನ್ನು ಪೊಲೀಸರ ಸಮ್ಮುಖದಲ್ಲಿ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿ ಬಸವರಾಜುಗೆ ವಾಪಸ್ ಮಾಡಿದ್ದು, ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.
ಏನಾಗಿತ್ತು?: ಭೀಮನ ಅಮಾವಾಸ್ಯೆ ಹಿನ್ನೆಲೆ ಗುರುವಾರ ಮಾದಪ್ಪನ ಸನ್ನಿಧಿಗೆ ದೇವರ ದರ್ಶನ ಪಡೆಯಲು ಸಾವಿರಾರು ಭಕ್ತರು ಆಗಮಿಸಿದ್ದರು. 500 ರೂ. ಟಿಕೆಟ್ ಕೌಂಟರ್ನಲ್ಲಿ ಸಿಬ್ಬಂದಿ ನಾಗಭೂಷಣ್ ಎಂಬುವರು ಸಂಗ್ರಹವಾಗಿದ್ದ 2.93 ಲಕ್ಷ ರೂ.ಗಳನ್ನು ಲಾಡು ಪ್ರಸಾದದ ಬ್ಯಾಗ್ನಲ್ಲಿ ಕಟ್ಟಿ ಟೇಬಲ್ನಲ್ಲಿ ಇಟ್ಟಿದ್ದರು. ಈ ವೇಳೆ ಜತೆಗಿದ್ದ ಸಹಾಯಕ ಹಣದ ಬ್ಯಾಗ್ ಪರಿಶೀಲಿಸದೆ ಲಾಡು ಪ್ರಸಾದದ ಬ್ಯಾಗ್ಗಳ ಜತೆ ಸೇರಿಸಿದ್ದ. ಆದರೆ, ಇದನ್ನು ಪರಿಶೀಲಿಸದೆ ನಾಗಭೂಷಣ್ ಅವರು ವೆಂಕಟೇಶ್ಮೂರ್ತಿಗೆ ಟಿಕೆಟ್, ಲಾಡು ಪ್ರಸಾದದ ಜತೆಗೆ ಹಣವಿದ್ದ ಬ್ಯಾಗ್ ಅನ್ನೂ ನೀಡಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹಣ ಕಳೆದುಕೊಂಡ ಬಗ್ಗೆ ಸುದ್ದಿ ಪ್ರಸಾರವಾಗಿತ್ತು.
ಅತ್ತ ವೆಂಕಟೇಶ್ಮೂರ್ತಿ ಅವರು ತನ್ನ ಸ್ನೇಹಿತರೊಂದಿಗೆ ಮಲೆಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಗೆ ಆಗಮಿಸಿ ಹಣವನ್ನು ಹಿಂತಿರುಗಿಸಿದ್ದಾರೆ. ಇನ್ಸ್ಪೆಕ್ಟರ್ ಸಮ್ಮುಖ ಪ್ರಾಧಿಕಾರದ ಉಪ ಕಾರ್ಯದರ್ಶಿ ಬಸವರಾಜು ಅವರಿಗೆ ಹಣವನ್ನು ಹಸ್ತಾಂತರಿಸಲಾಯಿತು. ಮನೆಗೆ ತೆರಳಿ ನೋಡಿದಾಗ ಹಣ ಇರುವುದು ತಿಳಿದುಬಂತು. ಹಾಗಾಗಿ ವಾಪಸ್ ನೀಡಿದ್ದೇನೆ ಎಂದು ವೆಂಕಟೇಶ್ಮೂರ್ತಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಹಣ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ್ದ ಸಿಬ್ಬಂದಿಯ ನೆರವಿಗೆ ಪ್ರಾಧಿಕಾರದ ನೌಕರರ ಸಂಘ ಧಾವಿಸಿತ್ತು. ಶುಕ್ರವಾರ ಸಂಜೆ 1 ಲಕ್ಷ ರೂ. ಚೆಕ್ ಅನ್ನು ಹಸ್ತಾಂತರಿಸಿತ್ತು. ಆದರೆ ಭಕ್ತನೇ ಬಂದು ವಾಪಸ್ ಹಣ ಕೊಟ್ಟಿದ್ದಂತೆ ಎಲ್ಲ ಸಮಸ್ಯೆಯೂ ಬಗೆಹರಿದಿದೆ.