

ಬೆಂಗಳೂರು: ಬುದ್ಧಿಮಾಂದ್ಯ ಹೆಣ್ಣು ಮಕ್ಕಳಿಬ್ಬರಿಗೆ ಜನ್ಮ ನೀಡಿದ್ದಳೆಂಬ ಕಾರಣಕ್ಕೆ ಮಹಿಳೆಯೊಬ್ಬರನ್ನು ಅಪಮಾನಿಸಿ, ಕಿರುಕುಳ ನೀಡಿ ಆಕೆಯ ಸಾವಿಗೆ ಕಾರಣರಾಗಿದ್ದ ಗಂಡ, ಅತ್ತೆ, ಮತ್ತು ನಾದಿನಿಗೆ ಹೈಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ.
ಪ್ರಕರಣವೇನು?: ಮಾದೇಶ ಹಾಗೂ ಹೇಮಲತಾ ಮದುವೆಯಾದ 6 ವರ್ಷಗಳ ಇಬ್ಬರು ಹೆಣ್ಣುಮಕ್ಕಳು ಜನಿಸಿದ್ದರು. ಆದರೆ, ಎರಡು ಮಕ್ಕಳೂ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದರು. ಇದೇ ವಿಚಾರಕ್ಕಾಗಿ ಹೇಮಲತಾಗೆ ಮಾದೇಶ ಮತ್ತವನ ತಾಯಿ ಹಾಗೂ ಸಹೋದರಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ದೂರಲಾಗಿತ್ತು. 2012ರ ನ.28ರಂದು ದಂಪತಿ ಮಧ್ಯೆ ಜಗಳ ಉಂಟಾಗಿತ್ತು. ಬಳಿಕ, ಮಾದಮ್ಮ ಸೊಸೆ ಮೇಲೆ ಸೀಮೆ ಎಣ್ಣೆ ಸುರಿದರೆ, ನಾದಿನಿ ಮಹದೇವಮ್ಮ ಬೆಂಕಿ ಹಚ್ಚಿದ್ದರು. ಬಳಿಕ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡುವ ಪ್ರಯತ್ನ ಮಾಡಲಾಗಿತ್ತಾದರೂ ಶೇ.85 ಸುಟ್ಟಗಾಯಗಳಾಗಿದ್ದ ಹೇಮಲತಾ ಮೃತಪಟ್ಟಿದ್ದರು.
ಹೇಮಲತಾ ನೀಡಿದ್ದ ಮರಣಪೂರ್ವ ಹೇಳಿಕೆ ಆಧರಿಸಿ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆದರೆ, ಹೇಮಲತಾ ಆತ್ಮಹತ್ಯೆ ಯತ್ನದಿಂದ ಮೃತಪಟ್ಟಿದ್ದಾರೆಂದು ವೈದ್ಯರು ನೀಡಿದ ವರದಿ ಹಾಗೂ ಕೆಲ ಪ್ರತಿಕೂಲ ಸಾಕ್ಷ್ಯಗಳ ಹಿನ್ನೆಲೆಯಲ್ಲಿ ಮಂಡ್ಯ ವಿಚಾರಣಾ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಳವಳ್ಳಿ ತಾಲೂಕಿನ ಕಿರುಗಾವಲು ಠಾಣೆಯ ಪೊಲೀಸರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಪೀಠ, ಮೃತಳ ಪತಿ ಮಾದೇಶ, ಅತ್ತೆ ಮಾದಮ್ಮ ಹಾಗೂ ನಾದಿನಿ ಮಹದೇವಮ್ಮಗೆ 1 ವರ್ಷ ಜೈಲು ಶಿಕ್ಷೆ ಹಾಗೂ ತಲಾ 20 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಹೈಕೋರ್ಟ್ ಆದೇಶವೇನು?: ಸಂತ್ರಸ್ತೆ ಹೇಮಲತಾ ಸಾಯುವ ಮುನ್ನ ನೀಡಿರುವ ಹೇಳಿಕೆಗೆ ಸಂಬಂಧಿಸಿದ ಸಾಕ್ಷ್ಯ ಅನುಮಾನಾಸ್ಪದವಾಗಿವೆ. ಆದರೆ, ಆಕೆಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿರುವ ವಿಚಾರದಲ್ಲಿ ಸಾಕ್ಷ್ಯಗಳು ಸರಿಯಾಗಿವೆ. ಬುದ್ಧಿಮಾಂದ್ಯ ಹೆಣ್ಣುಮಕ್ಕಳಿಗೆ ಹೇಮಲತಾ ಜನ್ಮ ನೀಡಿದ್ದರೆಂಬ ಕಾರಣಕ್ಕೆ ಅವರಿಗೆ ಮಾದಮ್ಮ ಮತ್ತು ಮಹದೇವಮ್ಮ ನಿರಂತರವಾಗಿ ಕಿರುಕುಳ ನೀಡಿದ್ದರೆಂಬುದು ಪ್ರಾಸಿಕ್ಯೂಷನ್ ಸಾಕ್ಷ್ಯಗಳಿಂದ ಸಾಬೀತಾಗಿದೆ. ಪತ್ನಿಯ ರಕ್ಷಣೆ ಜವಾಬ್ದಾರಿ ಹೊಂದಿರುವ ಪತಿ ಮಾದೇಶನೇ ಆಕೆಯ ಹೊಟ್ಟೆಗೆ ಒದೆಯುವ ಮೂಲಕ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.
ಐಪಿಸಿ ಸೆಕ್ಷನ್ 498ಎ (ಮಹಿಳೆಯ ಮೇಲೆ ಪತಿ ಅಥವಾ ಆತನ ಸಂಬಂಧಿಕರಿಂದ ಕ್ರೌರ್ಯ) ಅಡಿ ಆರೋಪಿಗಳಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ ತಲಾ 20 ಸಾವಿರ ದಂಡ ವಿಧಿಸಲಾಗಿದೆ. ಪ್ರಕರಣದಲ್ಲಿ ಖುಲಾಸೆಯಾಗುವುದಕ್ಕೂ ಮುನ್ನ ಮೃತಳ ಪತಿ ಹಾಗೂ ಅತ್ತೆ 3 ವರ್ಷ ಹಾಗೂ ನಾದಿನಿ 1 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಆದ್ದರಿಂದ, ಮೂವರೂ ತಲಾ 20 ಸಾವಿರ ರೂ. ದಂಡ ಪಾವತಿಸಬೇಕು. ಐಪಿಸಿ ಸೆಕ್ಷನ್ 504ರ (ಶಾಂತಿಭಂಗ ಮಾಡುವ ಉದ್ದೇಶದಿಂದ ಅಪಮಾನ) ಅಡಿಯ ಅಪರಾಧಕ್ಕಾಗಿ ಮೂವರೂ ತಲಾ 1 ಸಾವಿರದಂತೆ ಒಟ್ಟು 3 ಸಾವಿರ ರೂ. ದಂಡ ಪಾವತಿಸಬೇಕು. ಜತೆಗೆ, ಪತಿ ಮಾದೇಶ ಐಪಿಸಿ ಸೆಕ್ಷನ್ 323 (ಹಲ್ಲೆ) ಅಡಿ 1 ಸಾವಿರ ರೂ. ದಂಡ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.