

ದಾವಣಗೆರೆ: ರಾತ್ರೋರಾತ್ರಿ ಮನೆಯೊಂದರಲ್ಲಿ ಕಳ್ಳತನ ಮಾಡಲು ಬಂದ ಕಳ್ಳರಿಬ್ಬರ ಪೈಕಿ ಓರ್ವ ಮನೆ ಮೇಲಿಂದ ಬಿದ್ದು ದುರಂತ ಅಂತ್ಯಕಂಡ ಘಟನೆ ನಗರದಲ್ಲಿ ಸಂಭವಿಸಿದೆ.
ಕೆಟಿಜೆ ನಗರದ ಪರಶುರಾಂ (36) ಮೃತ ದುರ್ದೈವಿ. ಇಲ್ಲಿನ ಕೆಟಿಜೆ ನಗರ 13ನೇ ಕ್ರಾಸ್, 3ನೇ ಮುಖ್ಯ ರಸ್ತೆಯಲ್ಲಿರುವ ಸೈಯದ್ ಪೀರ್ ಎಂಬುವರ ಮನೆಯ ಸಜ್ಜಾ ಮೇಲೆ ಇದ್ದ ಅಲ್ಯುಮಿನಿಯಂ ಪೋಲ್ಗಳನ್ನು ಇಬ್ಬರು ಕಳವು ಮಾಡಲು ಮಂಗಳವಾರ ರಾತ್ರಿ ಯತ್ನಿಸುತ್ತಿದ್ದರು. ಈ ವೇಳೆ eಮನೆ ಮಾಲೀಕರು ಎಚ್ಚರಗೊಂಡು ಕಳ್ಳ ಕಳ್ಳ ಎಂದು ಕೂಗಿದ್ದಾರೆ.
ಹೆದರಿದ ಆರೋಪಿಗಳು ಪರಾರಿಯಾಗುವ ಧಾವಂತದಲ್ಲಿ ಪರಶುರಾಂ ಕೆಳಗೆ ಬಿದ್ದಿದ್ದು, ತಲೆಗೆ ತೀವ್ರ ಪೆಟ್ಟಾಗಿದೆ. ಆಸ್ಪತ್ರೆಗೆ ಸಾಗಿಸುವಾಗ ಆತ ಮೃತಪಟ್ಟಿದ್ದಾನೆ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಟಿಜೆನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.