

ಬೆಂಗಳೂರು: ರಾಜ್ಯದ ರಾಜಕೀಯ ಶಕ್ತಿ ಕೇಂದ್ರ ವಿಧಾನಸೌಧ ಹಾಗೂ ಕಾರ್ಯಾಂಗದ ನೆಲೆ ವಿಕಾಸಸೌಧದಲ್ಲಿ ದಸರಾ ಹಬ್ಬದ ಕಳೆಗಟ್ಟಿದೆ.
ಗುರುವಾರ ಮತ್ತು ಶುಕ್ರವಾರ ರಜೆಯಿರುವ ಕಾರಣಕ್ಕೆ ಒಂದು ದಿನ ಮುಂಚಿತವಾಗಿ ಬುಧವಾರ ಎರಡೂ ಸೌಧದ ಕೊಠಡಿಗಳಿಗೆ ಅಲಂಕರಿಸಿ, ಕೊಠಡಿಯೊಳಗೂ ತಮ್ಮ ಆಸಕ್ತಿ, ಅಭಿರುಚಿಗೆ ತಕ್ಕಂತೆ ಸಿಂಗರಿಸಿದ ಸಿಬ್ಬಂದಿ ಕುಂಬಳಕಾಯಿ, ತೆಂಗಿನಕಾಯಿ ಒಡೆದು ಪೂಜೆ ನೆರವೇರಿಸಿದರು.
ಸಚಿವ ಬೈರತಿ ಬಸವರಾಜ ಬೆಳಗ್ಗೆಯೇ ತಮ್ಮ ಕೊಠಡಿಯಲ್ಲಿ ಪೂಜೆ ನೆರವೇರಿಸಿದರು. ವಿಧಾನಸೌಧದ ಮೂರು ಮಹಡಿಯ ಎಲ್ಲ ಕೊಠಡಿಗಳಲ್ಲಿ ಸಡಗರ ನೆಲೆಸಿತ್ತು.
ಸಚಿವಾಲಯದ ಬಹಳಷ್ಟು ಸಿಬ್ಬಂದಿ ತಮ್ಮ ಕುಟುಂಬ ಸದಸ್ಯರನ್ನು ಕರೆ ತಂದಿದ್ದರು. ಮಹಿಳಾ ಸಿಬ್ಬಂದಿ ನೀಲಿ ಬಣ್ಣದ ಸೀರೆಯುಟ್ಟು ಪೂಜೆಯಲ್ಲಿ ಪಾಲ್ಗೊಂಡು, ಗ್ರೂಪ್ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.