

ಬೆಂಗಳೂರು: ರಾಜ್ಯಕ್ಕೆ ಚಂಡಮಾರುತ ಭೀತಿ ಎದುರಾಗಿದ್ದು, ಮಳೆ ಇನ್ನಷ್ಟು ಬಿರುಸುಗೊಳ್ಳಲಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಅ.24ರಂದು ಚಂಡಮಾರುತವಾಗಿ ಪರಿವರ್ತನೆಗೊಳ್ಳಲಿದೆ.
ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಕರಾವಳಿಗೆ ಅ.25ರಂದು ತಲುಪುವ ಮಾರುತಗಳು ಅಂದಿನ ದಿನದಂದು ಒಡಿಶಾ ಕರಾವಳಿಗೆ ಅಪ್ಪಳಿಸಲಿವೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮೂನ್ಸೂಚನೆ ನೀಡಿದೆ. ಸಮುದ್ರದಲ್ಲಿ ಗಾಳಿ ವೇಗ ಹೆಚ್ಚಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹಾಗೂ ಸಮುದ್ರ ತೀರದಲ್ಲಿ ವಾಸಿಸುತ್ತಿರುವ ಜನರು ಎಚ್ಚರಿಕೆಯಿಂದ ಇರುವಂತೆ ಐಎಂಡಿ ಹೇಳಿದೆ. ಆದರೆ, ಶುಕ್ರವಾರ (ಅ.21) ಸಂಜೆ ವೇಳೆಗೆ ಚಂಡಮಾರುತ ರೂಪುಗೊಳ್ಳುತ್ತದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ನಿಖರ ಮಾಹಿತಿ ಗೊತ್ತಾಗಲಿದೆ ಎಂದು ಹವಾಮಾನ ವೈಪರಿತ್ಯ ವಿಜ್ಞಾನ ಎಂ.ಬಿ.ರಾಜೇಗೌಡ ಸ್ಪಷ್ಟಪಡಿಸಿದ್ದಾರೆ.
ಬುಧವಾರ ರಾತ್ರಿ ರಾಜಧಾನಿ ಬೆಂಗಳೂರಿನಲ್ಲಿ 80 ಮಿ.ಮೀ. ಮಳೆಯಾಗಿದ್ದು, ಗುರುವಾರ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಸುರಿದಿದೆ. ಅ.20ರಿಂದ 23ರ ವರೆಗೆ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಬೀಳಲಿದೆ. ಉತ್ತರ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಚದುರಿದಂತೆ ಮಳೆ ಸುರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.