

ಬೆಂಗಳೂರು: ಚಾಮರಾಜಪೇಟೆ ಮೈದಾನ ಜಮೀರ್ರ ಅಪ್ಪನ ಆಸ್ತಿನಾ? ಗಣೇಶೋತ್ಸವ ನಡೆಸಲು ಅನುಮತಿ ಕೊಡಲ್ಲ ಅಂತ ಹೇಳೋಕೆ ಜಮೀರ್ ಯಾರು? ಎಂದು ಕಟುವಾಗಿಯೇ ಪ್ರಶ್ನಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಗಣೇಶ ಮೂರ್ತಿ ಕೂರಿಸೋಕೆ ಅನುಮತಿ ಕೊಡೋದು ಬಿಬಿಎಂಪಿ. ಚಾಮರಾಜಪೇಟೆ ಮೈದಾನ ಕಂದಾಯ ಇಲಾಖೆಗೆ ಸೇರಿದ ಆಸ್ತಿ, ಸರ್ಕಾರದ ಆಸ್ತಿ. ಅಲ್ಲಿ ಗಣೇಶೋತ್ಸವವನ್ನು ಅದ್ದೂರಿಯಾಗಿ ಮಾಡ್ತೀವಿ ಎಂದು ಘೋಷಿಸಿದ್ದಾರೆ.
ಇತ್ತೀಚಿಗೆ ಮಾತನಾಡಿದ್ದ ಶಾಸಕ ಜಮೀರ್ ಅಹ್ಮದ್ ಖಾನ್, 75ನೇ ಸ್ವಾಂತತ್ರ್ಯಅಮೃತ ಮಹೋತ್ಸವ ಇದೆ. ಈ ವರ್ಷದಿಂದ ಚಾಮರಾಜಪೇಟೆ ಮೈದಾನದಲ್ಲಿ ಎಲ್ಲರೂ ಸೇರಿಕೊಂಡು ಭಾರತದ ಧ್ವಜಾರೋಹಣ ಮಾಡ್ತೀವಿ. ನವೆಂಬರ್ 1, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಯನ್ನೂ ಇನ್ಮುಂದೆ ಇಲ್ಲಿಯೇ ಮಾಡಲಾಗುತ್ತೆ. ಆದರೆ, ಗಣೇಶೋತ್ಸವ ಮಾಡಂಗಿಲ್ಲ ಎಂದಿದ್ದರು. ಈ ಮಾತಿಗೆ ಗರಂ ಆದ ಹಿಂದುಪರ ಸಂಘಟನೆಗಳು, ನಮಾಜ್ ಮಾಡಬಹುದು ಅಂದ ಮೇಲೆ ಗಣೇಶೋತ್ಸವಕ್ಕೆ ಏಕೆ ಅವಕಾಶವಿಲ್ಲ ಎಂದು ಕಿಡಿಕಾರಿದ್ದರು. ಗಣೇಶೋತ್ಸವ ಮಾಡುತ್ತೇವೆ ಎಂದು ಸವಾಲು ಹಾಕಿದ್ದಾರೆ. ಇದೀಗ ಇದಕ್ಕೆ ದ್ವನಿಗೂಡಿಸಿರುವ ಸಿ.ಟಿ.ರವಿ, ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕಾ? ಇವನು ಯಾವ ಸೀಮೆಯ ದೊಣ್ಣೆ ನಾಯಕ? ನಮ್ಮ ದೇಶದಲ್ಲಿ ಗಣಪತಿ ಇಡೋದಕ್ಕೆ ಜಮೀರ್ನ ಅನುಮತಿ ಕೇಳಬೇಕಾ? ನಾವೇನು ಅರಬ್‌ನಲ್ಲಿ ಹೋಗಿ ಕೂರಿಸ್ತಿದ್ದೀವಾ? ಪ್ರಶ್ನಿಸಿದ್ದಾರೆ.
ನಮಗೆ ತಾಕತ್ ಇದೆ. ಗಣೇಶನನ್ನು ಕೂರಿಸ್ತೇವೆ. ಅದ್ದೂರಿಯಾಗಿ ಗಣೇಶೋತ್ಸವ ಮಾಡ್ತೀವಿ, ಯಾರು ತಡೀತಾರೆ ಬರಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ಚಾಮರಾಜಪೇಟೆ ಮೈದಾನಕ್ಕೆ ಚಾಮರಾಜೇಂದ್ರ ಒಡೆಯರ್ರ ಹೆಸರನ್ನ ಇಡಬೇಕು ಎಂದು ಆಗ್ರಹಿಸಿದರು.
ರಾಷ್ಟ್ರಧ್ವಜದ ಬಗ್ಗೆ ಸಿದ್ದರಾಮಯ್ಯ ಪಾಠ ಮಾಡ್ತಾರೆ. ಅವರದ್ದೇ ಸರ್ಕಾರ ಇದ್ದಾಗ ರಾಷ್ಟ್ರಧ್ವಜ ಹಿಡಿದುಕೊಂಡು ವಂದೇ ಮಾತರಂ ಗೀತೆ ಹಾಡುವಾಗ ಗೋಲಿಬಾರ್ ಮಾಡಿಸಿದ್ರು. ಎಂಟು ಜನರನ್ನು ಹತ್ಯೆ ಮಾಡಿದ್ರು. ಯಾವ 7 ಸಮುದ್ರಕ್ಕೆ ಹೋದ್ರೂ ಕಾಂಗ್ರೆಸ್ನ ಪಾಪ ಹೋಗಲ್ಲ. ರಾಷ್ಟ್ರಧ್ವಜ ಹಾರಿಸಿದವರ ಮೇಲೆ ಗುಂಡು ಹಾರಿಸಿದ್ರು ಎಂದು ಸಿ.ಟಿ.ರವಿ ಟೀಕಿಸಿದರು.