

ಬೆಂಗಳೂರು: ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಕೊನೆಗೂ ಸರ್ಕಾರಿ ವಸತಿ ನಿಲಯವನ್ನು ಖಾಲಿ ಮಾಡಿದ್ದಾರೆ.
ಆಗಸ್ಟ್ 5ರಂದು ಬಸವರಾಜ ಬೊಮ್ಮಾಯಿ ಅವರ ಸಂಪುಟ ರಚನೆಯಾಗಿತ್ತು. ಬಳಿಕ ಅಲ್ಲಿಂದ ಹಲವು ಸಚಿವರು ಸರ್ಕಾರಿ ವಸತಿಗಾಗಿ ಕಾದಿದ್ದಾರೆ. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕೂಡ ಮನೆಗಾಗಿ ಹರಸಾಹಸ ಪಡಬೇಕಾಯಿತು. ಮನೆ ಕೊಡಿ ಎಂದು ಎಂಟು ಬಾರಿ ಸರ್ಕಾರಕ್ಕೆ ಪತ್ರ ಬರೆಯಬೇಕಾಯಿತು.
ಆದರೆ, ಯೋಗೇಶ್ವರ್ ಮಾತ್ರ ತಾವು ಮತ್ತೆ ಮಂತ್ರಿಯಾಗಬಹುದೆಂಬ ಲೆಕ್ಕಾಚಾರದಲ್ಲಿ ಇಲ್ಲಿವರೆಗೂ ಕುಮಾರಕೃಪ ಪೂರ್ವದ ಗೃಹ ಸಂಖ್ಯೆ 3ರಲ್ಲೇ ಮುಂದುವರಿದಿದ್ದರು. ಕೊನೆಗೆ ಆ ಮನೆಯನ್ನು ಒತ್ತಾಯಪೂರ್ವಕವಾಗಿ ಅವರಿಂದ ಹಿಂಪಡೆದು ಸಭಾಪತಿಯವರಿಗೆ ಹಂಚಿಕೆ ಮಾಡಲಾಗಿತ್ತು. ಅಷ್ಟಾದರೂ ಮನೆ ಖಾಲಿ ಮಾಡಿರಲಿಲ್ಲ. ಮಂಗಳವಾರ ಮನೆ ಖಾಲಿ ಮಾಡಿದ್ದಾರೆಂಬ ಮಾಹಿತಿ ಲಭಿಸಿದೆ. ನವೆಂಬರ್ನಲ್ಲಿ ಹೊರಟ್ಟಿಯವರು ಆ ಮನೆಯಲ್ಲಿ ವಾಸ್ತವ್ಯ ಆರಂಭಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.