ಕೃಷಿ ಎಂದರೆ ಖುಷಿ ಎನ್ನುವ ದಂಪತಿ

negilayogi 3
Published on

* ಮಿಶ್ರ ಬೇಸಾಯದಿಂದ ಅಧಿಕ ಆದಾಯ

* ಸೊಂಟೇನಹಳ್ಳಿಯ ಮಾದರಿ ಕೃಷಿಕರು

* ಹೈನುಗಾರಿಕೆ ಜತೆಗೆ ಕೋಳಿ, ಕುರಿ ಸಾಕಣೆ

ಜಯರಾಮ ನಾಯಕ್​ ಹಾರೋಹಳ್ಳಿ

ಕೃಷಿ ಕ್ಷೇತ್ರದಲ್ಲಿ ನಷ್ಟವೇ ಹೊರತು ಲಾಭವಿಲ್ಲ ಎನ್ನುವವರ ನಡುವೆ ವ್ಯವಸಾಯದಲ್ಲಿ ಸಾಧನೆ ಮಾಡಿ ಲಾಂತರ ರೂಪಾಯಿ ಆದಾಯಗಳಿಸುತ್ತಿದ್ದಾರೆ ತಾಲೂಕಿನ ಹಾರೋಹಳ್ಳಿ ಹೋಬಳಿ ಸೊಂಟೇನಹಳ್ಳಿಯ ದಂಪತಿ ಜಿ.ವಿ. ಸುಮಿತ್ರಾ ಮತ್ತು ಎಸ್​.ಟಿ. ರಾಜು.

ಮಿಶ್ರ ಬೇಸಾಯ ಪದ್ಧತಿ ಅನುಸರಿಸುವ ಈ ದಂಪತಿ ಹೈನುಗಾರಿಕೆ, ಕೋಳಿ ಸಾಕಣೆ, ಕುರಿ, ತೆಂಗು, ಅಡಕೆ, ಬಾಳೆ ಕೃಷಿ ಮಾಡುತ್ತಿದ್ದಾರೆ.

ಕುರಿ ಸಾಕಣೆ ಮಾಡುವ ಇವರು ಉತ್ತರ ಕರ್ನಾಟಕದಿಂದ 50ಕ್ಕೂ ಹೆಚ್ಚು ಕುರಿ ಮರಿಗಳನ್ನು ತಂದು ಸಾಕಿ ವಾರ್ಷಿಕ 5ರಿಂದ 6 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. 15ಕ್ಕೂ ಹೆಚ್ಚು ಸೀಮೆಹಸುಗಳನ್ನು ಸಾಕಿರುವ ಇವರು ಯಾವುದೇ ಕೂಲಿ ಕೆಲಸಗಾರರನ್ನು ಅವಲಂಬಿಸದೆ ಸಲಹುತ್ತಿದ್ದಾರೆ. ಪ್ರತಿದಿನ 100 ಲೀಟರ್​ಗೂ ಹೆಚ್ಚು ಹಾಲು ಉತ್ಪಾದಿಸುತ್ತಿದ್ದಾರೆ. ಕೊಟ್ಟಿಗೆ ಗೊಬ್ಬರದಿಂದಲೂ ವಾರ್ಷಿಕ 60ರಿಂದ 70 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ.

ಗ್ರಾಮದ ಪಕ್ಕದಲ್ಲಿ ಹಾರೋಹಳ್ಳಿ ಕೈಗಾರಿಕಾ ಪ್ರದೇಶವಿರುವುದರಿಂದ ಹೆಚ್ಚಿನವರು ಕಾರ್ಖಾನೆಗಳಿಗೆ ಕೆಲಸಕ್ಕೆ ಹೋಗುತ್ತಾರೆ. ಇದರಿಂದ ಕೃಷಿಗೆ ಕಾರ್ಮಿಕರ ಸಮಸ್ಯೆ ಕಾಡುತ್ತಿದೆ. ಹಲವು ಬಾರಿ ವ್ಯವಸಾಯ ಕಷ್ಟ ಎನಿಸುತ್ತದೆ ಎನ್ನುತ್ತಾರೆ ಸುಮಿತ್ರಾ. ಆದರೂ ಕೃಷಿಯಲ್ಲಿಯೂ ಆದಾಯ ಗಳಿಸಬಹುದು ಎನ್ನುವುದನ್ನು ಮನವರಿಕೆ ಮಾಡಿ ಸುತ್ತಮುತ್ತಲ ಗ್ರಾಮದವರಿಗೆ ರಾಜು & ಸುಮಿತ್ರಾ ಮಾದರಿಯಾಗಿದ್ದಾರೆ.

400 ತೆಂಗಿನ ಮರ

ಐದು ಎಕರೆ ಜಮೀನಿನಲ್ಲಿ 400 ತೆಂಗಿನ ಮರಗಳಿವೆ, ಬಾಳೆ ಬೆಳೆದು ಅದರಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಈಗ ಸಾವಿರಕ್ಕೂ ಹೆಚ್ಚು ಅಡಕೆ ಗಿಡಗಳನ್ನು ನೆಟ್ಟಿದ್ದಾರೆ. ತೆಂಗು ಬೆಳೆಯಲ್ಲಿಯೂ ಆದಾಯ ಗಳಿಸುತ್ತಿದ್ದಾರೆ. ಮನೆಗೆ ಬೇಕಾದ ಮೆಣಸು, ತರಕಾರಿ, ರಾಗಿ, ಕಡಲೆಕಾಳು, ಹೆಸರು ಕಾಳುಗಳನ್ನು ದಂಪತಿ ಬೆಳೆಯುತ್ತಾರೆ.

4-5 ಲಕ್ಷ ರೂ. ಖರ್ಚು

ವಾರ್ಷಿಕ 17 ಲಕ್ಷ ರೂ.ಗಳಿಗೂ ದುಡಿಯುತ್ತಿದ್ದು, ಸುಮಾರು 4-5 ಲಕ್ಷ ರೂ.ವರೆಗೆ ರ್ಖಚಾಗುತ್ತದೆ. 12ರಿಂದ 13 ಲಕ್ಷ ರೂ. ಆದಾಯವಿದೆ ಎನ್ನುತ್ತಾರೆ ರೈತ ರಾಜು.

ಬಿಟ್ಟಿ ಭಾಗ್ಯ ಬದಲು ಉಚಿತ ಶಿಕ್ಷಣ ನೀಡಲಿ

ಕೃಷಿ ಆದಾಯದಿಂದಲೇ ಮಗನನ್ನು ಇಂಜಿನಿಯರಿಂಗ್​ ಓದಿಸುತ್ತಿದ್ದಾರೆ. ಜತೆಗೆ ಮಗಳನ್ನು ಓದಿಸುತ್ತಿದ್ದಾರೆ. ಮಕ್ಕಳ ಶಾಲಾ ಶುಲ್ಕವೇ ವಾರ್ಷಿಕ 10 ಲಕ್ಷ ರೂ. ದಾಟುತ್ತದೆ. ಸರ್ಕಾರ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಬೇಕಿದೆ. ಹಾಲಿಗೆ 10 ರೂ. ಪ್ರೋತ್ಸಾಹಧನ ನೀಡಬೇಕು. ರೈತರಿಂದ ಖರೀದಿಸುವ ಪ್ರತಿ ಲೀಟರ್​ ಹಾಲಿಗೆ 40 ರೂ. ನೀಡಬೇಕು. ಆಗ ರೈತರಿಗೆ ಅನುಕೂಲವಾಗುತ್ತದೆ. ಸರ್ಕಾರ ಬಿಟ್ಟಿ ಭಾಗ್ಯಗಳನ್ನು ನೀಡುವ ಬದಲು ಉಚಿತ ಶಿಕ್ಷಣ, ಆರೋಗ್ಯ ಸೌಲಭ್ಯ ನೀಡುವುದರ ಕಡೆಗೆ ಗಮನ ಹರಿಸಬೇಕಿತ್ತು ಎನ್ನುವುದು ದಂಪತಿ ಮನದಾಳದ ಮಾತು.

ಹೈನುಗಾರಿಕೆಯಿಂದ ಪ್ರತಿದಿನ 100 ಲೀಟರ್​ಗೂ ಹೆಚ್ಚು ಹಾಲು ಉತ್ಪಾದಿಸುತ್ತಿದ್ದು, ಜತೆಗೆ ಕುರಿ ಸಾಕಣೆ, ಮಾರಾಟದಿಂದ ಲಾಂತರ ರೂ. ಆದಾಯ ಗಳಿಸುತ್ತಿದ್ದೇವೆ. > ಜಿ.ವಿ ಸುಮಿತ್ರಾ.ಅಡಕೆ, ತೆಂಗು, ಬಾಳೆ, ಕೃಷಿ, ಜತೆಗೆ ಈಗ ವಿವಿಧ ಹಣ್ಣುಗಳನ್ನು ಬೆಳೆಯಲು ಆಸಕ್ತಿ ವಹಿಸಿದ್ದೇವೆ. ಕೃಷಿ ಎಂದರೆ ಖುಷಿ. > ಎಸ್​.ಟಿ ರಾಜು ರೈತ.ಉತ್ತಮ ರೀತಿಯಲ್ಲಿ ತಾಂತ್ರಿಕತೆ ಬಳಸಿ ಬೇಸಾಯ ಮಾಡುತ್ತಿರುವ ರೈತರಿಗೆ ಇಲಾಖೆಯಿಂದ ಬರುವ ಸೌಲಭ್ಯಗಳನ್ನು ನೀಡಲಾಗುವುದು. ಹಾಗೂ ಇವರನ್ನು ಮತ್ತಷ್ಟು ಬಲಪಡಿಸುವ ಕೆಲಸ ಮಾಡಲಾಗುವುದು.> ರಾಧಾಕೃಷ್ಣ   ಸಹಾಯಕ ಕೃಷಿ ನಿರ್ದೇಶಕರು ಕನಕಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net