ಸಂಸ್ಕಾರವಂತರಿಂದ ದೇಶ ನಿರ್ಮಾಣ ಸಾಧ್ಯ

2
ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮದಲ್ಲಿ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ ಹಾಗೂ ಕನ್ನಡ ರೈತ ಯುವಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವವನ್ನು ಶಾಸಕ ಬಿ.ಎನ್.ರವಿಕುಮಾರ್ ಉದ್ಘಾಟಿಸಿದರು. ಪದ್ಮಶ್ರೀ ಪುರಸ್ಕೃತೆ ಡಾ.ಮಾತಾ ಬಿ.ಮಂಜಮ್ಮ ಜೋಗತಿ, ಚಲನಚಿತ್ರ ನಿರ್ದೇಶಕರಾದ ಪಿ.ಶೇಷಾದ್ರಿ, ನಾಗೇಂದ್ರಪ್ರಸಾದ್, ಖ್ಯಾತ ವೈದ್ಯ ಡಾ.ಟಿ.ಎಚ್.ಆಂಜಿನಪ್ಪ ಇತರರು ಇದ್ದರು.
Published on

ಪದ್ಮಶ್ರೀ ಪುರಸ್ಕೃತೆ ಡಾ.ಮಾತಾ ಬಿ.ಮಂಜಮ್ಮ ಜೋಗತಿ ಅನಿಸಿಕೆ- ಮೇಲೂರಿನಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

ಶಿಡ್ಲಘಟ್ಟ: ನಾವು ನಮ್ಮ ಮಕ್ಕಳಿಗೆ ಸಂಸ್ಕಾರವನ್ನು ಹೇಳಿಕೊಡುವಂತಾಗಬೇಕು. ಹೆತ್ತವರು, ಗುರುಗಳು ಹಾಗೂ ಹಿರಿಯರನ್ನು ಗೌರವಿಸುವ ಸಂಸ್ಕಾರವಂತರಿಂದ ಮಾತ್ರ ಉತ್ತಮ ದೇಶ ನಿರ್ಮಾಣ ಸಾಧ್ಯ ಎಂದು ಪದ್ಮಶ್ರೀ ಪುರಸ್ಕೃತೆ ಡಾ.ಮಾತಾ ಬಿ.ಮಂಜಮ್ಮ ಜೋಗತಿ ತಿಳಿಸಿದರು.

ತಾಲೂಕಿನ ಮೇಲೂರು ಗ್ರಾಮದಲ್ಲಿ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘ ಹಾಗೂ ಕನ್ನಡ ರೈತ ಯುವಕರ ಸಂಘದ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದರು.

ದೇವರು ಎಲ್ಲೂ ಇಲ್ಲ. ನಾವು ಮಾಡುವ ಕೆಲಸದಲ್ಲಿ ದೇವರನ್ನು ಹುಡುಕುವ ಕೆಲಸ ಆಗಬೇಕು. ದಕ್ಷತೆ, ಪ್ರಾಮಾಣಿಕತೆ ಹಾಗೂ ಸದುದ್ದೇಶದಿಂದ ಮಾಡುವ ಕಾರ್ಯದಲ್ಲಿ ನಾವು ದೇವರನ್ನು ಕಾಣುವಂತಾಗಬೇಕು ಎಂದು ಹೇಳಿದರು.

ಶಾಲಾ-ಕಾಲೇಜು ಮಕ್ಕಳು ಸಮಯ ಪ್ರಜ್ಞೆ ಬೆಳೆಸಿಕೊಳ್ಳಿ, ಹೆತ್ತವರು, ಗುರುಗಳನ್ನು ಗೌರವಿಸಿ, ನಿಮ್ಮ ಬದುಕಿನಲ್ಲಿ ಗುರಿ ಇಟ್ಟುಕೊಳ್ಳಿ, ಪ್ರಾಮಾಣಿಕತೆಯಿಂದ ನಿಮ್ಮ ಕೆಲಸವನ್ನು ನೀವು ಮಾಡಿ, ಉತ್ತಮ ಸಮಾಜ ಉತ್ತಮ ದೇಶ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.

ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ಶಾಲಾ ಮಕ್ಕಳು ತಮ್ಮ ಬದುಕಿನಲ್ಲಿ ತಂದೆ-ತಾಯಿ ಹಾಗೂ ಗುರುಗಳನ್ನು ದೇವರ ಸಮಾನರಾಗಿ ಕಾಣಿರಿ. ಅವರ ಮಾರ್ಗದರ್ಶನದಲ್ಲಿ ನಡೆದರೆ ಬದುಕು ಉತ್ತಮವಾಗುತ್ತದೆ. ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗುತ್ತೀರಿ ಎಂದರು. ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಂದು ಜಗತ್ತಿನ ಗಮನ ಸೆಳೆಯುತ್ತಿದೆ. ಬೆಂಗಳೂರನ್ನು ಅಂತಾರಾಷ್ಟ್ರೀಯ

ನಗರವನ್ನಾಗಿ ಪ್ರಧಾನಿ ಮೋದಿ ಅವರು ಘೋಷಿಸಿದ್ದು, ಇದರಿಂದ ಜಗತ್ತಿನಲ್ಲಿ ಬೆಂಗಳೂರಿನ ಮಾನ್ಯತೆ ಇನ್ನಷ್ಟು ಹೆಚ್ಚುತ್ತದೆ ಎಂದರು. ಇದರಿಂದ ಜಾಗತಿಕವಾಗಿ ಹೂಡಿಕೆ ಮಾಡುವ ಪ್ರಮಾಣ ಹೆಚ್ಚುತ್ತದೆ. ಅಭಿವೃದ್ಧಿಯೂ ಹೆಚ್ಚುತ್ತದೆ. ಇಂತಹ ಬೆಂಗಳೂರು ನಮ್ಮ ರಾಜಧಾನಿ ಆಗಿರುವುದು ನಮ್ಮೆಲ್ಲರ ಹೆಮ್ಮೆ ಎಂದು ಹರ್ಷ ವ್ಯಕ್ತಪಡಿಸಿದರು.

ಗ್ರಾಮದ ಸರ್ಕಾರಿ, ಖಾಸಗಿ ಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ನವಜೀವನ ಸೇವಾ ಸಂಘದ ಅಧ್ಯಕ್ಷ ಮುನಿರಾಜು, ಸಮಾಜ ಸೇವಕ ಎಚ್.ವಿ.ರಾಮಕೃಷ್ಣಪ್ಪ ಸೇರಿದಂತೆ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು. ಇದೇವೇಳೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ,

ನಾಗೇಂದ್ರಪ್ರಸಾದ್, ಹಾಸ್ಯನಟ ಉಮೇಶ್, ಖ್ಯಾತ ವೈದ್ಯ ಡಾ.ಟಿ.ಎಚ್.ಆಂಜಿನಪ್ಪ, ಸಾಹಿತಿ ಡಾ.ರಮೇಶ್, ಗ್ರಾಪಂ ಅಧ್ಯಕ್ಷೆ ಶಶಿಕಲಾ ರಮೇಶ್, ಮಾಜಿ ಅಧ್ಯಕ್ಷ ಆರ್.ಎ.ಉಮೇಶ್, ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಧರ್ಮೇಂದ್ರ, ಗೋಪಾಲ್, ಶ್ರೀನಿವಾಸ್, ಸುಧೀರ್, ಸುದರ್ಶನ್, ರೂಪೇಶ್ ಸೇರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.

ನಮ್ಮೆಲ್ಲರಿಗೂ ಆತ್ಮಸಾಕ್ಷಿ ಎಂಬುದಿದೆ. ಯಾರಿಗೂ ನಾವು ಭಯ ಪಡದಿದ್ದರೂ ನಮ್ಮ ಆತ್ಮಸಾಕ್ಷಿಗೆ ಭಯಪಟ್ಟು ಬದುಕು ನಡೆಸಬೇಕು. ತಪ್ಪು, ಸರಿ ಯಾವುದು ಎಂಬುದನ್ನು ನಮ್ಮ ಆತ್ಮಸಾಕ್ಷಿ, ಆತ್ಮಪ್ರಜ್ಞೆ ಎಂಬುದು ನಿರ್ಧರಿಸಬೇಕು. ಆಗ ಯಾರೂ ತಪ್ಪು ಮಾಡಲಾರರು - ಡಾ. ಮಾತಾ ಬಿ.ಮಂಜಮ್ಮ ಜೋಗತಿ ಪ್ರದ್ಮಶ್ರೀ ಪ್ರಶಸ್ತಿ ಪುರಸ್ಕೃತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net