ಇಂಡಿಯನ್ ಎಕ್ಸ್‌ಪ್ರೆಸ್ ಬಳಿಯೇ ರಾಜಭವನ ಚಲೋಗೆ ತಡೆ: ಸಿದ್ದರಾಮಯ್ಯರನ್ನ ಹೊತ್ತೊಯ್ದ ಪೊಲೀಸರು!

congress protest
Published on

ಬೆಂಗಳೂರು: ರಾಜಭವನಕ್ಕೆ ಮುತ್ತಿಗೆ ಹಾಕಲು ಬೆಂಗಳೂರಿನ ಕೆಪಿಸಿಸಿ ಕಚೇರಿಯಿಂದ ಕಾಂಗ್ರೆಸ್ ಭವನಕ್ಕೆ ಪಾದಯಾತ್ರೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕರನ್ನ ಇಂಡಿಯನ್ ಎಕ್ಸ್​​​​ಪ್ರೆಸ್​​ ವೃತ್ತದ ಬಳಿಯೇ ತಡೆದ ಪೊಲೀಸರು ಹಲವರನ್ನ ವಶಕ್ಕೆ ಪಡೆದರು. ಇದೇ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಹೊತ್ತೊಯ್ದ ಪೊಲೀಸರು ವ್ಯಾನ್​ ಹತ್ತಿಸಿದ ಪ್ರಸಂಗ ನಡೆಯಿತು.

ಕೇಂದ್ರ ಸರ್ಕಾರ ಇಡಿ, ಐಟಿ ದಾಳಿ ಹೆಸರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ದೇಶಾದ್ಯಂತ ಕೈ ಪಡೆ ಪ್ರತಿಭಟನೆ ನಡೆಸುತ್ತಿದೆ. ಇದರ ಮುಂದುವರಿದ ಭಾಗವಾಗಿ ರಾಜ್ಯ ಕಾಂಗ್ರೆಸ್ ನಾಯಕರು ಗುರುವಾರ ರಾಜಭವನ ಚಲೋಗೆ ಕರೆ ಕೊಟ್ಟಿದ್ದರು. ಬೆಳಗ್ಗೆ 10ಕ್ಕೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ಹೊರಟ ಪಾದಯಾತ್ರೆ, ಇಂಡಿಯನ್​ ಎಕ್ಸ್​ಪ್ರೆಸ್​ ಬಳಿಗೆ ಬರುತ್ತಿದ್ದಂತೆ ಪೊಲೀಸರು ತಡೆದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಹಲವರನ್ನ ವಶಕ್ಕೆ ಪಡೆದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿರಾರು ಕೋಟಿ ಹಣದ ಅಕ್ರಮ ವರ್ಗಾವಣೆ ಆರೋಪದಲ್ಲಿ ಸಿಲುಕಿರುವ ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್​ ಗಾಂಧಿ ಅವರನ್ನು ವಿಚಾರಣೆಗೆ ಕರೆದಿರುವ ಜಾರಿ ನಿರ್ದೇಶನಾಲಯದ (ಇಡಿ) ಕ್ರಮವನ್ನು ವಿರೋಧಿಸಿ ನಾಲ್ಕೈದು ದಿನಗಳಿಂದ ದೇಶಾದ್ಯಂತ ಕಾಂಗ್ರೆಸ್​ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net