

ಶಿವಮೊಗ್ಗ: ಕೇಸರಿ ಧ್ವಜವನ್ನು ಮುಂದೊಂದು ದಿನ ಕೆಂಪುಕೋಟೆ ಮೇಲೆ ಹಾರಿಸಲಾಗುವುದು ಎಂದಿದ್ದ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಶಾಸಕರು ಸದನದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೆ, ಅತ್ತ ಪಕ್ಷದ ಕಾರ್ಯಕರ್ತರು ಹೊರಗಡೆ ಧರಣಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನ: ಕೆಂಪುಕೋಟೆ ಮೇಲೆ ಭಗವಾ ಧ್ವಜ ಹಾರಿಸುವ ಕುರಿತಂತೆ ಈಶ್ವರಪ್ಪ ನೀಡಿದ ಹೇಳಿಕೆ ವಿರೋಧಿಸಿ ಹಾಗೂ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಗುರುವಾರ ಶಿವಮೊಗ್ಗದಲ್ಲಿ ಸರಣಿ ಪ್ರತಿಭಟನೆಗಳು ನಡೆದವು. ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು. ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗ, ಜಿಲ್ಲಾ ಕಾಂಗ್ರೆಸ್ನಿಂದ ಪ್ರತ್ಯೇಕವಾಗಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಈಶ್ವರಪ್ಪ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ. ಅವರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕು. ಸಿಎಂ ಬಸವರಾಜ ಬೊಮ್ಮಾಯಿ ಈ ವಿಷಯದಲ್ಲಿ ಬಿಗಿ ನಿಲುವು ಪ್ರದಶಿರ್ಸಬೇಕೆಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.
ಸದನದಲ್ಲೂ ಪ್ರತಿಭಟನೆ: ಗುರುವಾರ ಮಧ್ಯಾಹ್ನ ಭೋಜನದ ಬಳಿಕ ವಿಧಾನನಸಭೆ ಕಲಾಪ ಪ್ರಾರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮುಂದುವರಿಸಿದರು. ಸಿಎಂ ಬಸವರಾಜ ಬೊಮ್ಮಾಯಿ ಅವರು ಎಷ್ಟೇ ಮನವೊಲಿಸಿದರೂ ಕಾಂಗ್ರೆಸ್ ಶಾಸಕರು ಮಾತ್ರ ಪಟ್ಟು ಸಡಿಸಲಿಲ್ಲ. ಅಹೋರಾತ್ರಿ ಧರಣಿ ಕೈಬಿಡಿ, ನಾಳೆ ಬಳೆಗ್ಗೆ ಕಲಾಪ ಆರಂಭವಾದ ಬಳಿಕ ಧರಣಿ ಮುಂದುವರಿಸಿ ಎಂದು ಮನವಿ ಮಾಡಿದರೂ ಸ್ಪಂದಿಸಲಿಲ್ಲ. ಬಳಿಕ ಸ್ಪೀಕರ್ ನಾಳೆ ಬೆಳಗ್ಗೆ 11 ಗಂಟೆವರಗೂ ಕಲಾಪ ಮುಂದೂಡಿದರೂ ಕಾಂಗ್ರೆಸ್ ಧರಣಿ ಮುಂದುವರಿದಿದೆ.
ಕಲಬುರಗಿಯಲ್ಲೂ ಪ್ರತಿಭಟನೆ: ಈಶ್ವರಪ್ಪರ ಹೇಳಿಕೆ ವಿರೋಧಿಸಿ ಕಲಬುರಗಿಯಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾದರು. ಈ ವೇಳೆ ಬಿಜೆಪಿ 20ಕ್ಕೂ ಹೆಚ್ಚು ಮಂದಿಯನ್ನ ಪೊಲೀಸರು ವಶಕ್ಕೆ ಪಡೆದರು.