

ಮೈಸೂರು: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಗೆಲುವನ್ನು ನನ್ನ ತಂದೆ ಮಾದೇಗೌಡರಿಗೆ ಅರ್ಪಿಸುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮಧು. ಜಿ. ಮಾದೇಗೌಡ ಹೇಳಿದ್ದಾರೆ.
ಜೂ.13ರಂದು ನಡೆದಿದ್ದ ಚುನಾಣೆಯ ಮತ ಎಣಿಕೆ ಕಾರ್ಯ ನಗರದ ಪಡುವಾರಹಳ್ಳಿಯ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ನಿನ್ನೆಯಿಂದ(ಬುಧವಾರ) ನಡೆಯುತ್ತಿದೆ. 24 ಗಂಟೆ ಕಳೆದರೂ ಮತ ಎಣಿಕೆ ಮುಕ್ತಾಯಗೊಂಡಿಲ್ಲ. ಯಾವುದೇ ಅಭ್ಯರ್ಥಿ ನಿಗದಿತ ಕೋಟಾ ತಲುಪಿಲ್ಲವಾದರೂ ಕಾಂಗ್ರೆಸ್ ಅಭ್ಯರ್ಥಿ ಮಧು ಮುನ್ನಡೆ ಸಾಧಿಸಿದ್ದಾರೆ. ಇವರ ಗೆಲುವು ಬಹುತೇಕ ಖಚಿತವಾಗಿದೆ.
ಹಾಗಾಗಿ ಫಲಿತಾಂಶ ಘೋಷಣೆಗೂ ಮುನ್ನವೇ ದಿಗ್ವಿಜಯ ನ್ಯೂಸ್ ಜತೆ ಮಾತನಾಡಿದ ಮಧು, ಜೆಡಿಎಸ್ನ ಸಂಪ್ರದಾಯಕ ಮತಗಳು ಕಾಂಗ್ರೆಸ್ಗೆ ಬಂದಿವೆ. ಜೆಡಿಎಸ್ ಎಂಎಲ್ಸಿ ಮರಿತಿಬೇಗೌಡರು ನಮ್ಮ ಪರವಾಗಿ ಕೆಲಸ ಮಾಡಿದ್ದು, ನನ್ನ ಗೆಲುವಿಗೆ ಸಹಕಾರಿಯಾಗಿದೆ. ನಮ್ಮ ತಂದೆಯ ಆಶೀರ್ವಾದ, ಕಾಂಗ್ರೆಸ್ನ ಎಲ್ಲ ಹಿರಿಯ ಮುಖಂಡರ ಸಹಕಾರದಿಂದ ಗೆಲುವಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನನ್ನ ಮೇಲೆ ನಂಬಿಕೆ ಇಟ್ಟಿದ್ರು. ಆ ನಂಬಿಕೆಯನ್ನ ಉಳಿಸಿಕೊಳ್ಳುತ್ತೇನೆ. ವ್ಯವಸ್ಥಿತವಾಗಿ ಕೆಲಸ ಮಾಡಿದ್ದು, ಗೆಲುವಿಗೆ ಸಹಕಾರಿಯಾಗಿದೆ ಎಂದರು.
ದಕ್ಷಿಣ ಪದವೀಧರ ಕ್ಷೇತ್ರದ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ಪಕ್ಷೇತರ ಅಭ್ಯರ್ಥಿ ಪ್ರಸನ್ನ ಎನ್. ಗೌಡ ಅವರನ್ನು ಎಲಿಮಿನೇಟ್ ಮಾಡಲಾಗಿದೆ.
ಎಲಿಮಿನೇಟ್ ಮಾಡಿದ ನಂತರ ಮತಗಳ ವಿವರ ಹೀಗಿದೆ.
ಕಾಂಗ್ರೆಸ್- 38169
ಬಿಜೆಪಿ-29614
ಜೆಡಿಎಸ್- 19630
ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ 8555 ಮತಗಳ ಮುನ್ನಡೆ ಸಾಧಿಸಿದ್ದಾರೆ. ಇದು ಬೆಳಗ್ಗೆ 9.30ರ ವರೆಗಿನ ಚಿತ್ರಣ.