

ಬೆಂಗಳೂರು: ರಾಜ್ಯದ ಜನತೆಗೆ ಕೊಟ್ಟ ಮಾತನ್ನು ಬಿಜೆಪಿ ಉಳಿಸಿಕೊಂಡಿಲ್ಲ. ಡಬಲ್ ಇಂಜಿನ್ ಸರ್ಕಾರ ಡಬಲ್ ವಿಫಲವಾಗಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದ್ದು, ಇಂದಿನಿಂದ ದಿನಕ್ಕೊಂದು ಪ್ರಶ್ನೆ ಕೇಳುವ ಅಭಿಯಾನ ಆರಂಭಿಸಲು ನಿರ್ಧರಿಸಿದೆ.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಈ ಸಂಬಂಧ ಕರಪತ್ರಗಳ ಬಿಡುಗಡೆ ಮಾಡುವ ಜತೆಗೆ ಕಿರುಚಿತ್ರಗಳನ್ನು ಪ್ರದರ್ಶಿಸಲಾಯಿತು. ಇದಕ್ಕೂ ಮುನ್ನ ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆದ ಪಕ್ಷದ ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ಚುನಾವಣೆ ಪ್ರಣಾಳಿಕೆಯಲ್ಲಿ 600 ಭರವಸೆಗಳನ್ನು ಈಡೇರಸದೆ ಶೇ.90ರಷ್ಟು ವಚನ ವಂಚನೆ ಮಾಡಿದೆ. ಈ ಪ್ರಣಾಳಿಕೆಯನ್ನು ಮುಂದಿಟ್ಟು, ಸರ್ಕಾರಕ್ಕೆ ಜನರಿಂದಲೇ ದಿನಕ್ಕೊಂದು ಪ್ರಶ್ನೆ ಕೇಳುತ್ತೇವೆ ಎಂದರು.
ಬಿಜೆಪಿ ಅಂದರೆ ಬಹುತ್ ಜೂಟಾ ಪಾರ್ಟಿ, ಬಿಟ್ರೆಯಲ್ ಜನತಾ ಪಾರ್ಟಿ ಹಾಗೂ ಬೇಕೂಫ್ ಬನಾವೋ ಜನತಾ ಪಾರ್ಟಿ ಅಂತಲೂ ಕರೆಯಬಹುದು ಎಂದ ಸುರ್ಜೆವಾಲಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅತ್ಯಂತ ಅಸಮರ್ಥ, ಅಸಹಾಯಕ, ಅದಕ್ಷ ಸಿಎಂ ಎಂದು ಕಿಡಿಕಾರಿದರು.
ವಿಷಯಾಂತರ ಪ್ರಯತ್ನ: ಜನರಿಗೆ ದ್ರೋಹ ಬಗೆದ ಬಿಜೆಪಿ, ವಾಸ್ತವಾಂಶ ಮುಚ್ಚಿ ಹಾಕಲು ಜಾತಿ, ಧರ್ಮದ ವಿಚಾರಗಳನ್ನು ಮುನ್ನೆಲೆಗೆ ತಂದು ವಿಷಯಾಂತರ ಮಾಡಲು ಪ್ರಯತ್ನಿಸುತ್ತಿದೆ ಎಂದು ಸಿದ್ದರಾಮಯ್ಯ ದೂಷಿಸಿದರು.