

ಹಾಸನ: ರೈಲು ಹಳಿ ದಾಟುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ರೈಲಿಗೆ ಸಿಲುಕಿ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ಹಾಸನದಲ್ಲಿ ಸಂಭವಿಸಿದೆ. ಈ ಸಾವಿಗೇ ರೈಲ್ವೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಮೇಲ್ಸೇತುವೆ ನಿರ್ಮಾಣ ಮಾಡಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ ಎಂದು ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಗುಡ್ಡೆತೆರಣ್ಯ ಗ್ರಾಮದ ಪ್ರೀತಿ ಮೃತ ವಿದ್ಯಾರ್ಥಿನಿ. ಮೊಸಳೆಹೊಸಹಳ್ಳಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಪ್ರೀತಿ ಸೋಮವಾರ ಕಾಲೇಜಿಗೆ ಹೋಗುವಾಗ ಹಾಸನ ತಾಲೂಕಿನ ಅಂಕಪುರ ಗ್ರಾಮದ ಬಳಿ ಈ ಅವಘಡ ಸಂಭವಿಸಿದೆ.
ರೈಲ್ವೆ ಹಳಿ ದಾಟುತ್ತಿದ್ದ ಪ್ರೀತಿ, ಚಲಿಸುತ್ತಿದ್ದ ರೈಲಿಗೆ ಸಿಲುಕಿ ಅಲ್ಲೇ ದುರಂತ ಅಂತ್ಯ ಕಂಡಿದ್ದಾಳೆ. ಪ್ರೀತಿ ಸಾವಿನ ಸುದ್ದಿ ಕೇಳಿ ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು ಮತ್ತು ಕುಟುಂಬಸ್ಥರು, ಇತರ ವಿದ್ಯಾರ್ಥಿಗಳು ಮೊಸಳೆಹೊಸಹಳ್ಳಿ ಗ್ರಾಮದಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಹಾಸನ- ಮೈಸೂರು ಹೆದ್ದಾರಿಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ರಸ್ತೆಯಲ್ಲಿ ಟಯರ್ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿದರು. ಈ ಭಾಗದಲ್ಲಿ ಸಂತೆ ಹಾಗೂ ಕಾಲೇಜುಗಳಿವೆ. ಮುಂಜಾಗ್ರತೆಯಾಗಿ ತಡೆಗೋಡೆಯನ್ನೂ ನಿರ್ಮಾಣ ಮಾಡಿಲ್ಲ ಅಸಮಾಧಾನ ಹೊರಹಾಕಿದರು. ಜೀವ ಕೈಯಲ್ಲಿ ಹಿಡಿದುಕೊಂಡೇ ರೈಲ್ವೆ ಹಳಿ ದಾಟಿ ಕಾಲೇಜಿಗೆ ಹೋಗಬೇಕಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಮೇಲ್ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.