ಬೆಂಗಳೂರಲ್ಲಿ ತಪ್ಪಿದ ಭಾರೀ ದುರಂತ: ನೋಡನೋಡುತ್ತಿದ್ದಂತೆ ಕುಸಿದು ಬಿತ್ತು ಮೂರಂತಸ್ತಿನ ಮನೆ!

Collapse home in lakkasandra banglore
Published on

ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಸೋಮವಾರ ನೋಡ ನೋಡುತ್ತಿದ್ದಂತೆಯೇ ಮೂರಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಈ ಮನೆಯಲ್ಲಿ 40ಕ್ಕೂ ಹೆಚ್ಚು ಮೆಟ್ರೋ ಮಾರ್ಗ ನಿರ್ಮಾಣ ಕಾರ್ಮಿಕರು ವಾಸವಿದ್ದರು. ಅದೃಷ್ಟವಶಾತ್​ ಮನೆಯಲ್ಲಿ ಇದ್ದವರೆಲ್ಲ ಹೊರಗೆ ಓಡಿ ಬಂದು ಬಚಾವ್ ಆಗಿದ್ದಾರೆ.

ನಗರದ ಲಕ್ಕಸಂದ್ರ ಬಳಿ ಈ ಘಟನೆ ಸಂಭವಿಸಿದೆ. ಹಳೇಯ ಕಟ್ಟಡ ಇದಾಗಿದ್ದು, ಎರಡು ವರ್ಷದ ಹಿಂದೆ ಸ್ವಲ್ಪ ವಾಲಿತ್ತು. ಇಂದು ಬೆಳಗ್ಗೆ ಈ ಹಿಂದಿಗಿಂತಲೂ ಕಟ್ಟಡ ಹೆಚ್ಚು ಬಾಗಿದ್ದು, ಅವಘಡದ ಮುನ್ಸೂಚನೆ ಅರಿತು ಮನೆಯಲ್ಲಿ ಇದ್ದವರೆಲ್ಲಾ ಹೊರಗೆ ಬಂದಿದ್ದರು. ದೇವರ ದಯೆ, ಮನೆಯಲ್ಲಿದ್ದವರಲ್ಲ ಹೊರ ಬಂದ ಮೇಲೆ ಕಟ್ಟಡ ಕುಸಿದು ಬಿದ್ದಿದೆ.

ಹಳೇ ಕಟ್ಟಡ ಕುಸಿತದಿಂದ ಅಕ್ಕಪಕ್ಕದ ಮನೆಗಳಿಗೆ ಹಾನಿಯಾಗಿದೆ. ಕಟ್ಟಡ ಕುಸಿಯುವುದಕ್ಕಿಂತ ಕೆಲ ಸಮಯ ಮುನ್ನ ಅಗ್ನಿಶಾಮಕ ಸಿಬ್ಬಂದಿ ಕಾರ್ಮಿಕರನ್ನು ತೆರವುಗೊಳಿಸಿದ್ದರು. ಹೀಗಾಗಿ ಮೆಟ್ರೋ ಕಾರ್ಮಿಕರ ತೆರವಿನಿಂದ ಭಾರಿ ಅನಾಹುತ ತಪ್ಪಿದೆ. ಹಳೇ ಕಟ್ಟಡ ಕುಸಿಯುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು. ಜನ ಆತಂಕಕ್ಕೆ ಒಳಗಾಗಿದ್ದಾರೆ.

ಲಕ್ಕಸಂದ್ರದ 7ನೇ ಮುಖ್ಯರಸ್ತೆ, 14ನೇ ಕ್ರಾಸ್‌ನಲ್ಲಿನ ಈ ಮೂರು ಅಂತಸ್ತಿನ ಕಟ್ಟಡವನ್ನು 1974ರಲ್ಲಿ ನಿರ್ಮಿಸಲಾಗಿತ್ತು. ಸುರೇಶ್ ಎಂಬುವವರಿಗೆ ಈ ಮನೆ ಸೇರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net