

ಹುಬ್ಬಳ್ಳಿ: ವಿಧಾನ ಪರಿಷತ್ನ ಶಿಕ್ಷಕರ ಪಶ್ಚಿಮ ಕ್ಷೇತ್ರದ ಚುನಾವಣೆಯ ಮತದಾನ ನಡೆಯುತ್ತಿದ್ದು, ಹಲವರು ತೆರೆಮರೆಯಲ್ಲಿ ಕೊನೇ ಹಂತದ ಕಸರತ್ತು ನಡೆಸುತ್ತಿದ್ದಾರೆ. ನಿಯಮ ಉಲ್ಲಂಘಿಸಿ ಮತಗಟ್ಟೆ ಅಧ್ಯಕ್ಷಧಿಕಾರಿಯೊಬ್ಬರು ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದರು ಎಂಬ ಆರೋಪ ಕೇಳಿಬಂದ ಹಿನ್ನೆಲೆ ಅವರ ಜಾಗಕ್ಕೆ ಬೇರೆಯವರನ್ನ ನೇಮಿಸಿದ ಪ್ರಸಂಗ ಹುಬ್ಬಳ್ಳಿಯ ಬಾಸೆಲ್ ಮಿಶನ್ ಬಾಲಕರ ಶಾಲೆ ಮತಗಟ್ಟೆ ಸಂಖ್ಯೆ 26ರಲ್ಲಿ ನಡೆದಿದೆ.
26ರ ಮತಗಟ್ಟೆ ಅಧ್ಯಕ್ಷಧಿಕಾರಿ ಶಶಿಕಾಂತ ಮಂಟೂರ ಅವರನ್ನು ಬದಲಾವಣೆ ಮಾಡಲಾಯಿತು. ಮತಪತ್ರದಲ್ಲಿದ್ದ ಕ್ರಮ ಸಂಖ್ಯೆ 1ಕ್ಕೆ 1ನೇ ಪ್ರಾಶಸ್ತ್ಯ, ಕ್ರಮ ಸಂಖ್ಯೆ 2ಕ್ಕೆ 2ನೇ ಪ್ರಾಶಸ್ತ್ಯ ಹಾಗೂ ಕ್ರಮ ಸಂಖ್ಯೆ 3ಕ್ಕೆ 3ನೇ ಪ್ರಾಶಸ್ತ್ಯದ ಮತ ಚಲಾಯಿಸುವಂತೆ ಶಿಕ್ಷಕ ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದರು ಎಂಬ ದೂರು ಬಂದ ಹಿನ್ನೆಲೆಯಲ್ಲಿ ಇವರನ್ನು ಬದಲಾವಣೆ ಮಾಡಲಾಗಿದೆ.
ಮತ ಪತ್ರದ ಕ್ರಮ ಸಂಖ್ಯೆ 2ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗುರಿಕಾರ, ಕ್ರಮ ಸಂಖ್ಯೆ 2ರಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರ ಹೆಸರಿದೆ. ಕಣದಲ್ಲಿ 7 ಅಭ್ಯರ್ಥಿಗಳಿದ್ದು, 1ರಿಂದ 7ರವರೆಗೆ ಪ್ರಾಶಸ್ತ್ಯದ ಮತ ಚಲಾಯಿಸಲು ಈ ಚುನಾವಣೆಯಲ್ಲಿ ಅವಕಾಶವಿದೆ.
ಘಟನೆ ಬಳಿಕ ಅಭ್ಯರ್ಥಿ ಬಸವರಾಜ ಹೊರಟ್ಟಿ ಹಾಗೂ ಬಿಜೆಪಿ ಮುಖಂಡರು ಮತಗಟ್ಟೆಗೆ ಭೇಟಿ ನೀಡಿದ್ದರು. ಮತಗಟ್ಟೆಯ ಎಆರ್ಒ ಹಾಗೂ ಎಲ್ಲ ಸಿಬ್ಬಂದಿಯನ್ನು ಬದಲಾವಣೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಶಿಕ್ಷಕ ಮತದಾರರಾದ ಶಿಬಾ ಪ್ರತಾಪನ್, ಆರ್.ಎಂ. ವರಕೋಟಿ ಹಾಗೂ ಸುನೀಲ ನಾಜರೆ ಲಿಖಿತ ದೂರು ನೀಡಿದ್ದಾರೆ.