ಹೆಸರು ಕೆಡಿಸ್ಕೋಬೇಡಿ, ಸರ್ಕಾರ-ಪಕ್ಷಕ್ಕೆ ಮುಜುಗರ ತರಬೇಡಿ: ಶಾಸಕರು- ಸಚಿವರಿಗೆ ಸಿಎಂ ವಾರ್ನಿಂಗ್​

CMBommai
Published on

ಬೆಂಗಳೂರು: ಹೆಸರು ಕೆಡಿಸ್ಕೋಬೇಡಿ, ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ತರಬೇಡಿ. ವೈಯಕ್ತಿಕವಾಗಿ ಸಂದಿಗ್ಧ ಸ್ಥಿತಿಗೆ ಸಿಲುಕಬೇಡಿ ಎಂದು ಸಚಿವರು ಹಾಗೂ ಶಾಸಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

ವಿಧಾನಮಂಡಲ ಅಧಿವೇಶನ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್​ನಲ್ಲಿ ಮಂಗಳವಾರ ಕರೆದಿದ್ದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಿಎಂ, ಚುನಾವಣೆ ಹತ್ತಿರ ಬರುತ್ತಿರುವ ಕಾರಣ ವಿರೋಧಿಗಳು ಖೆಡ್ಡಾ ತೋಡುತ್ತಾರೆ. ಈ ಬಗ್ಗೆ ಜಾಗ್ರತೆ ವಹಿಸಿ. ವಿರೋಧಿಗಳು ತೋಡುವ ಖೆಡ್ಡಾಕ್ಕೆ ಬೀಳದಿರಿ ಎಂದು ತಾಕಿತು ಹೇಳಿದ್ದಾರೆ.

ಅವ್ಯವಹಾರದ್ದೇ ಧ್ಯಾನ: ಪ್ರತಿಪಕ್ಷ ಕಾಂಗ್ರೆಸ್ ಪದೇಪದೆ ಎತ್ತುತ್ತಿರುವ ಶೇ.40 ಕಮಿಷನ್ ಇನ್ನಿತರ ಆರೋಪಗಳ ಬಗ್ಗೆ ಪಕ್ಷ ಮತ್ತು ಸರ್ಕಾರದಿಂದ ಸಮರ್ಥ ಉತ್ತರ ನೀಡುತ್ತಿಲ್ಲವೆಂಬ ಅಸಮಾಧಾನವನ್ನೂ ಕೆಲವರು ತೋಡಿಕೊಂಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ಅವಧಿಯ ಹಗರಣಗಳು, ಅಕ್ರಮಗಳನ್ನು ದಾಖಲೆ ಸಹಿತ ವಿವರಿಸಲು ಎಲ್ಲ ಸಜ್ಜಾಗಿ ಒಗ್ಗಟ್ಟಿನಿಂದ ಅಧಿವೇಶನವನ್ನು ಎದುರಿಸಬೇಕು ಎಂದು ತಿಳಿಹೇಳಲಾಗಿದೆ. ಇದೇ ವೇಳೆ ನಿರಂತರ ಅತಿವೃಷ್ಟಿ, ಪ್ರವಾಹ ಇದರ ಕರೊನಾ ಹಾವಳಿಯಿಂದ ಅಭಿವೃದ್ಧಿ ಕೆಲಸಗಳು ಸರಿಯಾಗಿ ಆಗುತ್ತಿಲ್ಲ, ಅಧಿಕಾರಿಗಳು ಮಾತು ಕೇಳುತ್ತಿಲ್ಲ, ಚುನಾವಣೆಗೆ ಹೋಗುವ ಸಂದರ್ಭದಲ್ಲಿ ಸರ್ಕಾರದ ಇಮೇಜ್ ವೃದ್ಧಿಯಾಗುತ್ತಿಲ್ಲ ಎಂದು ಬಹುತೇಕ ಶಾಸಕರು ವೇದನೆ ತೋಡಿಕೊಂಡಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ವಲಸಿಗರನ್ನು ತಾತ್ಸಾರ ಮಾಡಲಾಗುತ್ತಿದೆ. ಪಕ್ಷದಿಂದಲೂ ಸ್ಪಂದನೆಯಿಲ್ಲವೆಂಬ ಹೆಚ್ಚ ತೊಡಗಿದೆ. ಆರ್.ಶಂಕರ್, ಪ್ರತಾಪಗೌಡ ಪಾಟೀಲ್​ರಿಗೆ ಏನೂ ಮಾಡಲಿಲ್ಲವೆಂದು ನಮ್ಮನ್ನು ತಿವಿಯುತ್ತಿದ್ದು, ಕನಿಷ್ಠಪಕ್ಷ ಮುಂದಿನ ಚುನಾವಣೆಗೆ ಟಿಕೆಟ್ ಖಾತರಿಯನ್ನಾದರೂ ನೀಡಿ ಎಂದು ಕೆಲ ವಲಸಿಗರು ಗಟ್ಟಿ ಧ್ವನಿಯಲ್ಲಿ ಸಿಟ್ಟು ತೋಡಿಕೊಂಡಿದ್ದಾರೆ. ನಮ್ಮ ಶ್ರಮ ಏನು ಎಂಬುದು ಯಡಿಯೂರಪ್ಪ ಅವರಿಗೆ ಗೊತ್ತಿದೆ, ಅವರಿಂದ ಮಾಹಿತಿ ಪಡೆಯಿರಿ ಎಂದು ತಾಕೀತು ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net