ಪ್ರವೀಣ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿ 25 ಲಕ್ಷ ರೂ. ಚೆಕ್​ ವಿತರಣೆ: ಕಟುಕರಿಗೆ ಶಿಕ್ಷೆ ಕೊಡಿಸದೆ ಬಿಡಲ್ಲ ಎಂದ ಸಿಎಂ

praveen
Published on

ಮಂಗಳೂರು: ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಮನೆಗೆ ಗುರುವಾರ ಸಂಜೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 25 ಲಕ್ಷ ರೂ. ಚೆಕ್ ​ಅನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.

ಪ್ರವೀಣ್​ ಹತ್ಯೆ ಅತ್ಯಂತ ಅಮಾನವೀಯ. ಇದೊಂದು ಪೂರ್ವ ಯೋಜಿತ ಕೃತ್ಯ. ದಕ್ಷಿಣ ಕನ್ನಡ ಭಾಗದಲ್ಲಿ ಕಳೆದ ಹತ್ತು ವರ್ಷದಿಂದ ಸಮಾಜಘಾತುಕಶಕ್ತಿಗಳ ಕೃತ್ಯ ಹೆಚ್ಚಾಗಿದೆ. ಕೇರಳದಿಂದಲೂ ಈ ರೀತಿಯ ಕೃತ್ಯಕ್ಕೆ ಪ್ರೇರಣೆ ಸಿಕ್ಕಿದೆ. ಕೇವಲ ಕೊಲೆ ಪ್ರಕರಣ ಅಲ್ಲ, ದೇಶವನ್ನು ಛಿದ್ರ ಮಾಡುವ ಕೃತ್ಯ. ಈಗಾಗಲೇ ತನಿಖೆ ಆರಂಭವಾಗಿದೆ. ಶೀಘ್ರವೇ ಎಲ್ಲ ಆರೋಪಿಗಳನ್ನೂ ಬಂಧಿಸಲಾಗವುದು. ಎಡಿಜಿಪಿ ಇಲ್ಲೇ ಮೊಕ್ಕಾಂ ಹೂಡಿದ್ದಾರೆ, ಅವರೊಬ್ಬ ದಕ್ಷ ಅಧಿಕಾರಿ. ಈಗಾಗಲೇ ಎನ್​ಐಎ ಕರ್ನಾಟಕಕ್ಕೆ ಬೇಡಿಕೆ ಇದೆ. ಮಂಗಳೂರು ಭಾಗಕ್ಕೆ ಆದಷ್ಟು ಬೇಗ ಎನ್​ಐಎ ತರ್ತೇವೆ. ಎನ್​ಐಎಗೆ ತನಿಖೆ ಕೊಡುವ ಚಿಂತನೆ ಇದೆ. ಈ ಕೃತ್ಯಕ್ಕೆ ಬೆಂಬಲ ಕೊಟ್ಟ ಜಾಲವನ್ನ ಬೇಧಿಸುತ್ತೇವೆ. ಪ್ರವೀಣ್​ರ ಮಡದಿಯೂ ಅದೇ ಬೇಡಿಕೆ ಇಟ್ಟಿದ್ದಾರೆ ಎಂದು ಸಿಎಂ ಹೇಳಿದರು.

'ನನಗೆ ಬಂದ ಗತಿ ಮುಂದೆ ಯಾರಿಗೂ ಬರಬಾರದು. ಈ ಕೊಲೆಯ ಘಟನೆಗಳು ಇಲ್ಲಿಗೆ ಕೊನೆಗೊಳ್ಳಬೇಕು' ಎಂದು ಪ್ರವೀಣ್​ರ ಪತ್ನಿ ನೂತನ, ಸಿಎಂ ಬಳಿ ಗದ್ಗದಿತರಾದರು. ಇದೇ ವೇಳೆ ನೆರೆದಿದ್ದ ಜನ, ಬುಧವಾರ ಪ್ರವೀಣ್ ಪಾರ್ಥಿವ ಶರೀರ ಯಾತ್ರೆ ವೇಳೆ ಲಾಠಿಚಾರ್ಜ್ ನಡೆಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಘೋಷಣೆ ಕೂಗಿದರು.

ಪ್ರವೀಣ್​ ಇಡೀ ಕುಟುಂಬಕ್ಕೆ ಆಧಾರವಾಗಿದ್ದ. ಕುಟುಂಬಕ್ಕೆ ಸರ್ಕಾರದ ವತಿಯಿಂದ 25 ಲಕ್ಷ ರೂ. ನೀಡಿದ್ದೇವೆ. ಕುಟುಂಬಸ್ಥರ ಮುಂದಿನ ಭವಿಷ್ಯಕ್ಕೆ ಎಲ್ಲ ಸಹಕಾರ ನೀಡ್ತೇವೆ. ಕಟುಕರಿಗೆ ಶಿಕ್ಷೆ ಆದಾಗ ಮಾತ್ರ ಪ್ರವೀಣ್​ ಆತ್ಮಕ್ಕೆ ಶಾಂತಿ ಎಂದು ಸಿಎಂ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net