ಶಿವಮೊಗ್ಗದ ಹರ್ಷನ ಹತ್ಯೆ ಪ್ರಕರಣ: ತನಿಖಾ ವರದಿ ಬಂದ ನಂತರ ಮುಂದಿನ ನಿರ್ಧಾರ ಎಂದ ಸಿಎಂ

bommai
Published on

ಬೆಂಗಳೂರು: ಶಿವಮೊಗ್ಗದ ಹರ್ಷನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಪೊಲೀಸರು ವಿಚಾರಣೆ ನಡೆಸಿದ್ದು, ತನಿಖಾ ವರದಿ ಬಂದ ನಂತರ ಸರ್ಕಾರದ ಮುಂದಿನ ನಡೆ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದರು.

ಆರ್​ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರಿಗೆ‌ ಬುಧವಾರ ಪ್ರತಿಕ್ರಿಯಿಸಿದ ಸಿಎಂ, ಶಿವಮೊಗ್ಗದಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಶಾಂತಿ‌ ಮತ್ತು ಸುವ್ಯವಸ್ಥೆ ಕಾಪಾಡುವ‌ ಜತೆಗೆ ತನಿಖೆಯೂ ಪ್ರಗತಿಯಲ್ಲಿದೆ. ಈ ಘಟನೆ ಕುರಿತು ತನಿಖೆ ನಡೆಸಲು ಪೊಲೀಸರಿಗೂ ಅವಕಾಶ ಕೊಡಬೇಕು. ಪೊಲೀಸರ ತನಿಖಾ ವರದಿ ಸಲ್ಲಿಕೆಯಾದ ಬಳಿಕ ಯಾವ ಸಂಸ್ಥೆಗೆ ಒಪ್ಪಿಸಬೇಕು, ತನಿಖೆ ಸ್ವರೂಪ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಯುವಕನ ಹತ್ಯೆ ನಂತರ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ವಿಧಿಸಿದ್ದರೂ ಅದನ್ನು ಉಲ್ಲಂಘಿಸಿ ಮೆರವಣಿಗೆ ಮಾಡಿದ್ದು, ಸರ್ಕಾರಿ ಪ್ರಾಯೋಜಿತ ದಂಗೆ ಎಂಬ ಪ್ರತಿಪಕ್ಷ ಕಾಂಗ್ರೆಸ್ ಆರೋಪವನ್ನು ತಳ್ಳಿ ಹಾಕಿದ ಸಿಎಂ, ‌ಹೆಚ್ಚು‌ ಅಧಿಕಾರದಲ್ಲಿದ್ದ ಕಾಂಗ್ರೆಸ್ ಆಗ ಇಂತಹದ್ದೆಲ್ಲ ಮಾಡಿಸಿದ್ದರ ಅನುಭವದಲ್ಲಿ ಈ ರೀತಿ ಹೇಳುತ್ತಿದೆ ಎಂದು ‌ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net