

ಅಳವಂಡಿ: ಆರೋಗ್ಯಕರ ಜೀವನ ನಡೆಸಲು ಶುದ್ಧ ಪರಿಸರ ಅವಶ್ಯ. ದುಡ್ಡಿನಿಂದ ಆಸ್ತಿ, ಮನೆ ಖರೀದಿಸಬಹುದು ಆದರೆ ಆರೋಗ್ಯವನ್ನಲ್ಲ ಎಂದು ಕಲಿಕೆ ಟಾಟಾ ಟ್ರಸ್ಟ್ ಸಂಯೋಜಕ ಸಿದ್ದಲಿಂಗ ರೆಡ್ಡಿ ಹೇಳಿದರು.
ಸಮೀಪದ ನೀರಲಗಿ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಟಾಟಾ ಕಲಿಕೆ ಟ್ರಸ್ಟ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಆರೋಗ್ಯದಿಂದ ಇರಬೇಕಾದರೆ ಮನೆಯ ಸುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕೆಟ್ಟ ವಿಚಾರಗಳಿಂದ ದೂರವಿರಬೇಕು. ಬಹುಪಾಲು ರೋಗಗಳು ನೀರಿನಿಂದ ಬರುತ್ತವೆ. ಆದ್ದರಿಂದ ಶುದ್ಧ ನೀರು ಕುಡಿಯಬೇಕು ಎಂದರು. ನಂತರ ಹಾಡುಗಳ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು. ಶಿಕ್ಷಕರಾದ ಕೃಷ್ಣಪ್ಪ ಬಣ್ಣದ, ಅಂದಪ್ಪ ಹಾರೋಗೇರಿ, ಆಶಾಬೀ ಹಡಗಲಿ, ವಿಜಯಲಕ್ಷ್ಮೀ, ಮಲ್ಲಪ್ಪ ಕುರಿ ಇತರರಿದ್ದರು.