More

    ಸಾಂಕ್ರಾಮಿಕ ರೋಗಗಳು ಹರಡುವ ಸಂದರ್ಭದಲ್ಲಿ ಪರಿಶುದ್ಧ ಪರಿಸರವೇ ಮದ್ದು

    ಪ್ರಕೃತಿಯು ಸಹಜವಾಗಿ ಪರಿಶುದ್ಧವಾದುದು. ಇಲ್ಲಿರುವ ಕೋಟ್ಯಂತರ ಜೀವಜಂತುಗಳಿಂದಾಗಿ ಶುದ್ಧತೆಯು ತನ್ನ ಪಾವಿತ್ರ್ಯನ್ನು ಕಳೆದುಕೊಳ್ಳುತ್ತ ಹೋಗುತ್ತದೆ. ಮನೆಯ ಕಸವನ್ನು ಖಾಲಿಯಿರುವ ಪಕ್ಕದ ಕಂಪೌಂಡ್​ನಲ್ಲಿ ಅಥವಾ ಸಮೀಪದ ಪಾಳುಬಿದ್ದ ಸ್ಥಳದಲ್ಲಿ ಹಾಕಿದರೆ ಮನೆಯೇನೋ ನಿರ್ಮಲವಾಯಿತೆಂದು ಅಂದುಕೊಳ್ಳಬಹುದು. ಆದರೆ ಹಾಕಿದ ಕಸದಲ್ಲಿ ಹುಟ್ಟಿದ ಸೊಳ್ಳೆ, ಇನ್ನಿತರ ಕ್ರಿಮಿಗಳಿಗೆ ಈ ಗಡಿಪ್ರದೇಶ ಅರ್ಥವೂ ಆಗುವುದಿಲ್ಲ, ಅನ್ವಯವೂ ಆಗುವುದಿಲ್ಲ. ಅದು ಮತ್ತೆ ಬರುವುದು ನಮ್ಮ ಮನೆಗೇ! ಮನೆಯ ಸ್ವಚ್ಛತೆಗೆ ಜೀವ ತುಂಬಬೇಕಾದರೆ ಸುತ್ತಮುತ್ತಲಿನ ಪ್ರದೇಶವನ್ನೂ ಹಾಗೆಯೇ ಸಂರಕ್ಷಿಸಬೇಕು. ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಗೂ ನಾಡು, ದೇಶವನ್ನು ಅಂದವಾಗಿ ಮತ್ತು ನಿರ್ಮಲವಾಗಿ ಇಟ್ಟುಕೊಳ್ಳುವ ಜವಾಬ್ದಾರಿಯಿದೆ. ಆದರೆ ಅಷ್ಟೇ ಸಾಕಾಗುವುದಿಲ್ಲ, ಸಾಂಕ್ರಾಮಿಕ ರೋಗಗಳು ಹರಡುವ ಸಂದರ್ಭದಲ್ಲಿ ನಾವಿರುವ ಜಗತ್ತೇ ಪರಿಶುದ್ಧವಾಗಿರಬೇಕೆಂಬುದು ನಮಗೀಗ ಬೇಗ ಮನದಟ್ಟಾಗುತ್ತಿದೆ.

    ಸಾಂಕ್ರಾಮಿಕ ರೋಗಗಳು ಹರಡುವ ಸಂದರ್ಭದಲ್ಲಿ ಪರಿಶುದ್ಧ ಪರಿಸರವೇ ಮದ್ದುಪರಿಸರವನ್ನು ಸದಾ ಶುದ್ಧವಾಗಿಟ್ಟುಕೊಳ್ಳಬೇಕು ಎಂಬುದು ನಿಜ. ಅದರಲ್ಲೂ ರೋಗ ಶೀಘ್ರವಾಗಿ ಹರಡುವ ಸಂದರ್ಭದಲ್ಲಿ ಇನ್ನೂ ಹೆಚ್ಚಿನ ಮುತುವರ್ಜಿ, ಜಾಗರೂಕತೆಗಳು ಅನಿವಾರ್ಯ. ಘನತೆವೆತ್ತ ಭಾರತದ ಪ್ರಧಾನಮಂತ್ರಿಗಳು 21 ದಿನಗಳ ಅವಧಿಗೆ ಹೇಳಿದ ಸ್ವಯಂನಿರ್ಬಂಧದ ಹಿಂದೆ ಪ್ರತಿ ಜೀವವನ್ನೂ ಗೌರವಯುತವಾಗಿ ಸಂರಕ್ಷಿಸುವ ಸದಾಶಯವಿದೆ. ಸ್ವಚ್ಛ ದೇಶ, ಸ್ವಚ್ಛ ದೇಹಗಳ ಹೃನ್ಮನಪೂರ್ವಕ ಅನುಷ್ಠಾನಕ್ಕೆ ಪ್ರಯತ್ನಶೀಲ ಸ್ವಚ್ಛ ಮನಸ್ಸು ಬೇಕು. ಹಾಗಿದ್ದರೆ ಮಾತ್ರ ಸೋಂಕುಕಾರಕ ಸೂಕ್ಷ್ಮಕ್ರಿಮಿಗಳ ಕೊಂಡಿ ತುಂಡರಿಸಬಹುದು. ಆಯುರ್ವೆದದ ಅಷ್ಟಾಂಗ ಹೃದಯ ಗ್ರಂಥದ ಉತ್ತರಸ್ಥಾನದಲ್ಲಿ ಕ್ರಿಮಿಕೀಟಾದಿಗಳ ವಿಷಗಳು ಪಸರಿಸುವಿಕೆಯ ತಡೆಯನ್ನು ವಿವರಿಸುವಾಗ 21 ದಿನಗಳಲ್ಲಿ ವಿಷಬಾಧೆ ಶಮನವಾಗುತ್ತದೆ ಎಂದಿರುವುದೂ ಇಲ್ಲಿ ಕಾಕತಾಳೀಯವಾಗಿದೆ!

    ಜನಪದವನ್ನು ಪೀಡಿಸುವ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ವಾತಾವರಣವನ್ನು ರೋಗಕಾರಕ ಸೂಕ್ಷ್ಮಕ್ರಿಮಿಗಳಿಂದ ಮುಕ್ತವಾಗಿಸಲು ಆಯುರ್ವೆದ ಅಷ್ಟಾಂಗಧೂಪದ ಪ್ರಯೋಗವನ್ನೂ ಹೇಳಿದೆ. ಇಂತಹ ಜ್ವರಗಳನ್ನು ನಿರ್ಬಂಧಿಸಲು ಅಷ್ಟಾಂಗ ಧೂಪ, ಅಪರಾಜಿತ ಧೂಪ, ಮಾಹೇಶ್ವರ ಧೂಪ, ಚಾತುರ್ಥಾಕ ಜ್ವರಹರ ಧೂಪ ಎಂಬ ನಾಲ್ಕು ಬಗೆಯ ಧೂಪಗಳನ್ನು ಹೇಳಲಾಗಿದ್ದು ಅವು ಕೂಡ ಮಹತ್ವಪೂರ್ಣವಾಗಿವೆ. ದೇಸಿಗೋವಿನ ತುಪ್ಪ, ಗುಗ್ಗುಲು, ಬಜೆ, ಸಾಸಿವೆ, ಬಾರ್ಲಿ, ಕಹಿಬೇವಿನ ಎಲೆ, ಕಂಕುಷ್ಠ ಹಾಗೂ ಅಳಲೆಕಾಯಿ – ಈ ಎಂಟು ದ್ರವ್ಯಗಳಲ್ಲಿ ಸಿಗುವವುಗಳನ್ನು ಸಮಪ್ರಮಾಣದಲ್ಲಿ ಬೆರೆಸಿ ಬಳಸಿಕೊಂಡು ಸುಡುವುದರಿಂದ ಬರುವ ಹೊಗೆಯು ಈ ನಿಟ್ಟಿನಲ್ಲಿ ಬಲು ಪ್ರಯೋಜನಕಾರಿ ಎಂಬುದು ಆಯುರ್ವೆದದ ಅಭಿಮತ. ಪ್ರತಿನಿತ್ಯ ಬೆಳಗ್ಗೆ ಮತ್ತು ಸಾಯಂಕಾಲದ ಹೊತ್ತಿನಲ್ಲಿ ಇದನ್ನು ಪ್ರಯೋಗ ಮಾಡಬಹುದು. ಹಳ್ಳಿಗಳಲ್ಲಂತೂ ಇದರ ಅನುಷ್ಠಾನ ಸುಲಭ.

    ವಿಭಿನ್ನ ರೀತಿಯ ಜ್ವರ, ಶೀತಗಳು ನಾಡನ್ನು ಕಾಡುತ್ತಿದ್ದಾಗ ಷಡಂಗ ಪಾನೀಯವನ್ನು ಸಿದ್ಧಗೊಳಿಸಿ ದಿನವಿಡೀ ಕುಡಿಯಲು ಉಪಯೋಗಿಸಿದರೂ ಅನುಕೂಲವಾಗುತ್ತದೆ. ಷಡಂಗವೆಂದರೆ ಆರು ಭಾಗಗಳೆಂದು ಅರ್ಥ. ಭದ್ರಮುಷ್ಟಿ, ಪರ್ಪಟಕ, ಶುಂಠಿ, ಲಾವಂಚ, ಶ್ರೀಗಂಧ ಹಾಗೂ ಸುಗಂಧಬಾಲಾಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಈ ದ್ರವ್ಯಗಳಿಗಿಂತ ಅರುವತ್ತನಾಲ್ಕು ಪಟ್ಟು ನೀರು ಹಾಕಿ ಕುದಿಸಿ ಸೋಸಿ ಈ ಪಾನೀಯವನ್ನು ಆಗಾಗ ಸೇವಿಸುತ್ತಿರಬೇಕು. ಮನದಿಂದ ಆರಂಭವಾಗುವ ಶುಭ್ರತೆಯ ಸ್ವಭಾವ ಮನೆಯಲ್ಲೆಲ್ಲ ತುಂಬಿ ಜಗದ ಉದ್ದಗಲಕ್ಕೂ ವ್ಯಾಪಿಸಿದರೆ, ಅದುವೇ ಜನರೆಲ್ಲರಿಗೆ ರೂಢಿಯಾದರೆ ಸಮಾಜದಲ್ಲಿ ಸ್ವಾಸ್ಥ್ಯ್ಥಾಪನೆ ಮರೀಚಿಕೆಯಾಗುವುದಿಲ್ಲ.

    ಪಂಚಸೂತ್ರಗಳು

    • ನೇರಳೆಹಣ್ಣು: ಪ್ಲೀಹದ ರೋಗಗಳಲ್ಲಿ ಉಪಯುಕ್ತ.
    • ನೆಲಬೇವು: ಹೊಟ್ಟೆನೋವು ಶಮನಕಾರಿ.
    • ಲವಂಗ: ಸೊಂಟನೋವು ಕಡಿಮೆಗೊಳಿಸುವುದು.
    • ಅಳಲೆಕಾಯಿ: ಯಕೃತ್ ರೋಗಗಳಲ್ಲಿ ಉಪಯುಕ್ತ.
    • ಅಂಬಟೆಕಾಯಿ: ಕಾಯಿಯಾಗಿದ್ದರೆ ಜ್ವರವಿದ್ದಾಗ ಹಿತಕಾರಿ.
    • ಹುಣಸೆಹಣ್ಣಿಗೆ ಶುಂಠಿ, ಒಣಮೆಣಸು, ಬೆಲ್ಲ ಹಾಕಿ ಪಾನಕ ಮಾಡಿ ಕುಡಿದರೆ ಜ್ವರ ನಿಯಂತ್ರಣಕ್ಕೆ ಅನುಕೂಲ.

    ಕರೊನಾ ಸೋಂಕಿನ ಶಂಕೆಯಲ್ಲಿ ಕ್ವಾರಂಟೇನ್‌ನಲ್ಲಿದ್ದೀರಾ? ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts