

ತುಮಕೂರು: ಚಿಕ್ಕನಾಯಕನಹಳ್ಳಿ ಕುಪ್ಪೂರು ಗದ್ದುಗೆ ಸಂಸ್ಥಾನ ಮಠಕ್ಕೆ ಉತ್ತರಾಧಿಕಾರಿ ಅಧಿಕೃತ ಆಯ್ಕೆಯಾಗಿಲ್ಲ, ಲಿಂಗೈಕ್ಯರಾದ ಡಾ.ಯತೀಶ್ವರ ಶಿವಾಚಾರ್ಯ ಶ್ರೀಗಳ ಅಂತ್ಯಸಂಸ್ಕಾರಕ್ಕೆ ಯಾರಾದರೊಬ್ಬರು ಅಗತ್ಯವಾಗಿದ್ದ ಹಿನ್ನೆಲೆಯಲ್ಲಿ ತೇಜಸ್ ಅವರನ್ನು ನೇಮಿಸಿಕೊಳ್ಳಲಾಗಿತ್ತು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದರು.
ನಾನು ಮಠಕ್ಕೆ ಭೇಟಿ ನೀಡುವ ಪೂರ್ವದಲ್ಲಿ ಯಡಿಯೂರುಶ್ರೀಗಳ ಸಮ್ಮುಖದಲ್ಲಿ ಕುಟುಂಬ ಸದಸ್ಯರೆಲ್ಲಾ ಒಟ್ಟಾಗಿ ಮಹೇಶ್ ಅವರ ಪುತ್ರ ತೇಜಸ್ಗೆ ಅಧಿಕಾರ ನೀಡಬೇಕು ಎಂದು ನಿರ್ಧರಿಸಿದ್ದರು. ಜತೆಗೆ ಈ ಹಿಂದೆ ಶ್ರೀಚಂದ್ರಶೇಖರ ಸ್ವಾಮೀಜಿ ಕೂಡ ತಮ್ಮ ವಿಲ್ನಲ್ಲಿ ಮಹೇಶ್ ಪುತ್ರನಿಗೆ ಪಟ್ಟಾಧಿಕಾರ ನೀಡಬೇಕು ಎಂದು ಉಲ್ಲೇಖಿಸಿದ್ದಾರೆ. 8ನೇ ತರಗತಿ ಓದುತ್ತಿರುವ ತೇಜಸ್ ಅವರನ್ನು ನೇಮಕ ಮಾಡಲು ತೀರ್ಮಾನಿಸಲಾಗಿದ್ದು ಅದನ್ನು ಅನಿವಾರ್ಯವಾಗಿ ಸಾರ್ವಜನಿಕವಾಗಿ ಘೋಷಣೆ ಮಾಡಲಾಗಿತ್ತು, ಅವರಿಗೆ 18 ವರ್ಷ ಪೂರೈಸಿದಾಗ ಅವರೇ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಸುತ್ತೂರು ಮಠಕ್ಕೆ ಓದಲು ಕಳುಹಿಸಲಾಗುವುದು, ಔಪಚಾರಿಕ ಶಿಕ್ಷಣದ ಜತೆಗೆ ವೇದಾಧ್ಯಯನ ಕೂಡ ಕಲಿತು ಮಠಕ್ಕೆ ಅಗತ್ಯವಾದ ಸಂಸ್ಕಾರ ಕಲಿಯಲಿದ್ದಾರೆ ಎಂದರು.
ತೇಜಸ್ ಅಪ್ರಾಪ್ತನಾಗಿರುವ ಕಾರಣಕ್ಕೆ ಅವರನ್ನು ಗದ್ದುಗೆ ಮಠದ ಪಟ್ಟಾಧಿಕಾರಿಯಾಗಿ ಘೋಷಣೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ, ಅವರನ್ನು ಭವಿಷ್ಯದಲ್ಲಿ ನೇಮಕ ಮಾಡಲು ತೀರ್ಮಾನಿಸಲಾಗಿದೆ. ಸದ್ಯಕ್ಕೆ ತೇಜಸ್ ಅವರನ್ನು ಸ್ವಾಮೀಜಿ ಎಂದು ಪರಿಗಣಿಸುತ್ತಿಲ್ಲ. 18 ವರ್ಷವಾದ ಮೇಲೆ ಇಷ್ಟಪಟ್ಟರೆ ಅವರು ಪೀಠದಲ್ಲಿ ಕೂರಬಹುದು ಎಂದು ಮಾಧುಸ್ವಾಮಿ ಹೇಳಿದರು.
ಡಾ.ಯತೀಶ್ವರ ಸ್ವಾಮೀಜಿ ಸಹೋದರ ವಾಗೀಶ್ ಅವರ ಪುತ್ರ ಕೂಡ ಇದ್ದರು. ಅವರನ್ನು ನೇಮಕ ಮಾಡಬಹುದು ಎಂದು ನಾನು ಭಾವಿಸಿದ್ದೆ. ಆದರೆ, ಅವರಿಗೆ ಈಗಾಗಲೇ 26 ವರ್ಷವಾಗಿರುವ ಹಿನ್ನೆಲೆಯಲ್ಲಿ ತೇಜಸ್ ಆಯ್ಕೆಗೆ ಅವರ ಕುಟುಂಬಸ್ಥರು ನಿರ್ಧರಿಸಿದ್ದು, ಮಠದ ಪರಂಪರೆಯಂತೆ ಜನರು ಅದನ್ನೇ ಒಪ್ಪಿಕೊಳ್ಳಬಹುದು ಎಂದರು.